ದೇಶಮೈಸೂರು

ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಜೆಪಿ ನೆಲ ಕಚ್ಚಲಿದೆ: ಮೈಸೂರಲ್ಲಿ ಮಾಯಾವತಿ

ಮೈಸೂರು (ಏ.11): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸಂಪೂರ್ಣ ನೆಲ ಕಚ್ಚಲಿದೆ ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಹೇಳಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ‘ಆನೆ ನಡಿಗೆ ಸಂಸತ್ ಕಡೆಗೆ’ ಎಂಬ ಹೆಸರಿನಲ್ಲಿ ಬುಧವಾರ ಆಯೋಜಿಸಿದ್ದ ಬಿ.ಎಸ್.ಪಿ ಸಮಾವೇಶದಲ್ಲಿ ಮಾತನಾಡಿದ ಅವರು, 2014ರ ಚುನಾವಣೆಯಲ್ಲಿ 80 ಕ್ಷೇತ್ರಗಳಲ್ಲಿ 71 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಿಜೆಪಿ ಈ ಬಾರಿ ಬಿಎಸ್ಪಿ- ಎಸ್ಪಿ – ಆರ್ ಎಲ್ ಡಿ ಮೈತ್ರಿಯಿಂದಾಗಿ ಧೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದರು.

ಭಾಷಣದ ಪೂರ್ಣವಧಿ ಸಮಯವನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಟೀಕಿಸಲು ಮುಡಿಪಾಟ್ಟ ಮಾಯಾವತಿ, ಬಿಜೆಪಿಯ ಚೌಕಿದಾರ್ ಹಾಗೂ ಕಾಂಗ್ರೆಸ್‍ನ ನ್ಯಾಯ್ ಕನಿಷ್ಠ ಆದಾಯ ಯೋಜನೆ ಬಗ್ಗೆ ವ್ಯಂಗ್ಯವಾಡಿದರು. ಕಾಂಗ್ರೆಸ್, ಬಿಜೆಪಿ ಹಲವಾರು ವರ್ಷ ದೇಶ ಆಳಿವೆ. ಆದರೆ, ಬಡತನ ನಿರ್ಮೂಲನೆ ಮಾಡಲು ಈ ಪಕ್ಷಗಳಿಂದ ಸಾಧ್ಯವಾಗಿಲ್ಲ. ಉದ್ಯೋಗದಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯ. ಬಿಎಸ್‍ಪಿ ಅಧಿಕಾರಕ್ಕೆ ಬಂದರೆ ಪ್ರತಿ ಬಡ ಕುಟುಂಬದ ಒಬ್ಬರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗ ನೀಡುತ್ತೇವೆ ಎಂದರು.

ಬಿಜೆಪಿ ಇಡಿ, ಸಿಬಿಐ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ.ವಿಪಕ್ಷಗಳ ನಾಯಕರ ಮನೆಗಳ ಮೇಲೆ ದಾಳಿ ನಡೆಸುತ್ತಿದೆ. ಭ್ರಷ್ಟಚಾರ ಪ್ರತಿ ಹಂತದಲ್ಲಿ ತಾಂಡವವಾಡುತ್ತಿದೆ. ಹಿಂದೆ ಕಾಂಗ್ರೆಸ್ ಸರ್ಕಾರ ಬೊಪೋರ್ಸ್ ಹಗರಣದಲ್ಲಿ ಈಗ ಬಿಜೆಪಿ ಸರ್ಕಾರ ರಫೇಲ್ ಹಗರಣದಲ್ಲಿ ಮುಳುಗಿವೆ ಎಂದು ದೂರಿದರು. ಕರ್ನಾಟಕದಲ್ಲಿ ಬಿಎಸ್ಪಿ ಪಕ್ಷದ ಎನ್.ಮಹೇಶ್ ಅವರನ್ನು ಕೊಳ್ಳೇಗಾಲದಿಂದ ಆರಿಸಿ ಶಾಸಕರನ್ನಾಗಿ ಮಾಡಿದ್ದೀರಿ. ಸಚಿವರೂ ಆಗಿದ್ದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಮರ್ಥ್ಯವನ್ನು ಬಿಎಸ್‍ಪಿ ಹೊಂದಿದೆ ಎಂದು ಮಾಯಾವತಿ ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾತಂತ್ರ್ಯಾ ನಂತರ ತುಂಬಾ ವರ್ಷಗಳ ಕಾಲ ಕಾಂಗ್ರೆಸ್, ಬಿಜೆಪಿ ಹಾಗೂ ಇತರೆ ಪಕ್ಷಗಳ ಕೈಯಲ್ಲೇ ಅಧಿಕಾರ ಇತ್ತು. ಆದರೆ ಬಡತನ ತೊಲಗಿಸಲು ಸಾಧ್ಯವಾಗಲಿಲ್ಲ. ಈಗ ಕಾಂಗ್ರೆಸ್​ನವರ ನಾಟಕಗಳು, ಪ್ರಚಾರಗಳು ಮುಗಿಯಲಿವೆ. ಚೌಕಿದಾರ್ ಕಥೆಯೂ ಈ ಚುನಾವಣೆಯಲ್ಲಿ ಮುಗಿಯಲಿದೆ ಎಂದು ಬಿಎಸ್​ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಹೇಳಿದಾರೆ.

ಬಿಜೆಪಿಯವರ ಹೊಸ ಚೌಕಿದಾರ್ ನಾಟಕ ಈ‌ ಚುನಾವಣೆಯಲ್ಲಿ ನಡೆಯೋದಿಲ್ಲ. ಇವರ ನಾಟಕಗಳು ಎಲ್ಲವೂ ಈ‌ ಲೋಕಸಭೆಯಲ್ಲಿ ಮುಗಿಯುತ್ತೆ. ರೈತರಿಂದ ಹಿಡಿದು ಅನೇಕ ವರ್ಗದವರಿಗೆ ಪ್ರಧಾನಿ ಮೋದಿ ಕೊಟ್ಟಂತಹ ಭರವಸೆಗಳೆಲ್ಲವು ಹುಸಿಯಾಗಿದೆ. ಮೋದಿ ಸರ್ಕಾರ ಪ್ರಚಾರಕ್ಕಾಗಿಯೇ ನೀರಿನ ರೀತಿ ಸಾವಿರಾರು ಕೋಟಿ ನಷ್ಟ ಮಾಡಿದೆ. ನರೇಂದ್ರ ಮೋದಿ ಚುನಾವಣೆ ವೇಳೆ ಮಾತ್ರ ಏನೇನೋ ಘೋಷಣೆ ಮಾಡ್ತಾರೆ. ಇದನ್ನೆಲ್ಲ ಚುನಾವಣೆ ಘೋಷಣೆ ಮುನ್ನವೇ ಮಾಡಬಹುದಿತ್ತು. ರೈತರಿಗೆ ವಿದ್ಯುತ್ ಸೇರಿ ಎಲ್ಲ ರೀತಿಯ ಸಮಸ್ಯೆ ಹೆಚ್ಚಾಗಿದೆ. ಬಿಜೆಪಿ ಸರ್ಕಾರ ಕಾಂಗ್ರೆಸ್​ನಂತೆ ಏನೂ ಮಾಡದೆ ಜನರನ್ನ ವಂಚಿಸಿದೆ ಎಂದು ಬಿಎಸ್‌ಪಿ ಸಮಾವೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ವಿರುದ್ದ ಮಾಯಾವತಿ ಕಿಡಿ ಕಾರಿದರು.

ದೇಶವನ್ನು ಬಿಜೆಪಿ ಸರಕಾರ ಸುರಕ್ಷಿತವಾಗಿಟ್ಟಿಲ್ಲ. ದೇಶದ ಭದ್ರತೆ ವಿಚಾರದಲ್ಲೂ ಸರಕಾರ ಭ್ರಷ್ಟಾಚಾರ ನಡೆಸಿದೆ. ಕೇಂದ್ರ ಸರಕಾರದಲ್ಲಿ ಭ್ರಷ್ಟಾಚಾರ ತುಂಬಿದೆ. ಜಿಎಸ್‌ಟಿ ಮಧ್ಯಮ ವರ್ಗ ಮತ್ತು ಬಡವರಿಗೆ ಹೊರೆಯಾಗಿದೆ. ಭ್ರಷ್ಟಾಚಾರವೂ ಮೋದಿ ಸರ್ಕಾರದಲ್ಲಿ ಹೆಚ್ಚಾಗಿದೆ. ಕಾಂಗ್ರೆಸ್​ನ ಬೋಫೋರ್ಸ್, ಬಿಜೆಪಿಯ ರಫೇಲ್ ಹಗರಣ ಬಯಲಾಗಿದೆ. ಐಟಿ ಅಧಿಕಾರಿಗಳು ವಿರೋಧ ಪಕ್ಷದವರಿಗೆ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಯಾವತಿ ಟೀಕಿಸಿದರು.

ಚುನಾವಣಾ ಪೂರ್ವ ಪ್ರಣಾಳಿಕೆಗಳು ಕೇವಲ ಪ್ರಣಾಳಿಕೆ ಅಷ್ಟೇ. ಬಿಎಸ್ಪಿ ಹೇಳಲ್ಲ ಕೆಲಸ ಮಾಡುತ್ತೆ. ನಮ್ಮದೂ ಮಾತು ಕಡಿಮೆ, ಕೆಲಸ ಜಾಸ್ತಿ. ಜನರಿಗೆ ಹಣ ಕೊಟ್ಟರೆ ಬಡತನ ದೂರವಾಗಲ್ಲ. ಕಾಂಗ್ರೆಸ್ – ಬಿಜೆಪಿ ಎರಡು ಪಕ್ಷಗಳು ಈ ಹಣ ಕೊಡುವ ಯೋಜನೆ ಮಾಡಿವೆ. ಬಿಎಸ್ಪಿ ಮಾತ್ರ ಬಡವರಿಗೆ ಉದ್ಯೋಗ ಕೊಟ್ಟ ಬಡತನ ನಿರ್ಮೂಲನೆ ಮಾಡುವ ಪಣ ತೊಟ್ಡಿದೆ ಎಂದು ಮಾಯಾವತಿ ಹೇಳಿದರು.

ಕರ್ನಾಟಕದಲ್ಲೂ ಕಡು ಬಡವರು, ಅಸಹಾಯಕರು ಇದ್ದಾರೆ. ಅವರಿಗೆ ಒಳಿತು ಮಾಡುವ ಉದ್ದೇಶ ನಮ್ಮದಾಗಿದೆ. ನಾವು ದೆಹಲಿಯ ಗದ್ದುಗೆ ಏರಬೇಕಿದೆ. ಇಲ್ಲಿಂದಲೂ ನಮಗೆ ಸಹಕಾರ ನೀಡಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸಿ ಎಂದು ಬಿಎಸ್​ಪಿ ಮುಖ್ಯಸ್ಥೆ ಮನವಿ ಮಾಡಿದರು. (ಎನ್.ಬಿ)

Leave a Reply

comments

Related Articles

error: