
ಕರ್ನಾಟಕಪ್ರಮುಖ ಸುದ್ದಿ
ಸುಮಲತಾ ಬಿಜೆಪಿ ಅಭ್ಯರ್ಥಿ ಎಂಬುದು ಸ್ಪಷ್ಟ: ದಿನೇಶ್ ಗುಂಡೂರಾವ್
ದಾವಣಗೆರೆ (ಏ.11): ಪ್ರಧಾನಿ ನರೇಂದ್ರ ಮೋದಿ ಅವರು ಬೆಂಬಲಿಸಿ, ಹೇಳಿಕೆ ನೀಡಿರುವುದೇ ಸುಮಲತಾ ಅವರು ಬಿಜೆಪಿ ಅಭ್ಯರ್ಥಿ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಭಾರೀ ಮತಗಳ ಅಂತರದಲ್ಲಿ ಜಯ ಸಾಧಿಸಲಿದ್ದು, ಅಲ್ಲಿ ಮೈತ್ರಿ ಪಕ್ಷದ ಗೆಲುವು ನಿಶ್ಚಿತ ಎಂದರು.
ಇದೇ ವೇಳೆ ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸುಮಲತಾ ಪರ ಕೆಲಸ ಮಾಡಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಸಹಿಸುವುದಿಲ್ಲ. ಈಗಾಗಲೇ ಐವರನ್ನು ಪಕ್ಷದಿಂದಲೇ ಉಚ್ಚಾಟಿಸಿದ್ದು ಇಂತಹ ಘಟನೆಗಳು ಪುನರಾವರ್ತನೆಯಾದರೆ ಅಂತಹವರಿಗೆ ಪಕ್ಷದ ಹುದ್ದೆಗಳಿಂದಲೇ ಗೇಟ್ ಪಾಸ್ ನೀಡಲಾಗುವುದು ಎಂದು ಎಚ್ಚರಿಕೆ ಸಂದೇಶ ರವಾನಿಸಿದರು. (ಎನ್.ಬಿ)