ಮೈಸೂರು

ಏ.13 : ಸಂಸಾರದಲ್ಲಿ ಸನಿದಪ  ನಾಟಕ ಪ್ರದರ್ಶನ

ಮೈಸೂರು,ಏ.11:- ಮೈಸೂರಿನ ರಂಗವಲ್ಲಿ ತಂಡದ ಕಲಾವಿದರು ಏ.13ರ ಶನಿವಾರ ಸಂಜೆ 7 ಗಂಟೆಗೆ ಕಲಾಮಂದಿರದ ಆವರಣದಲ್ಲಿರುವ ‘ಕಿರುರಂಗ’ ಮಂದಿರದಲ್ಲಿ ಸಂಸಾರದಲ್ಲಿ ಸನಿದಪ ಎಂಬ ಹಾಸ್ಯ ನಾಟಕ ಪ್ರದರ್ಶಿಸಲಿದ್ದಾರೆ.  ನಾಡಿನ ಹಿರಿಯ ರಂಗಕರ್ಮಿ ಕೆ.ವಿ. ಅಕ್ಷರ ಅವರು ರಚಿಸಿರುವ ಈ ನಾಟಕವನ್ನು ರವಿಪ್ರಸಾದ್ ನಿರ್ದೇಶಿಸಿದ್ದಾರೆ.

ಯಾರೂ ಇಲ್ಲದ ಮನೆಗೆ ಕಳ್ಳನೊಬ್ಬನ ಪ್ರವೇಶ. ಅವನ ಹೆಂಡತಿ ಫೋನ್ ಮಾಡಿ ಆ ಮನೆಯ ಬಗ್ಗೆ ಅಮೂಲಾಗ್ರ ವಿಚಾರಣೆ. ಕಳ್ಳನ ವಿವರಣೆ, ಸಮಜಾಯಿಷಿ, ಅದೇ ಸಮಯಕ್ಕೆ ಪ್ರೇಯಸಿಯೊಂದಿಗೆ ಮನೆಯ ಯಜಮಾನನ ಪ್ರವೇಶ. ಗಡಿಯಾರದ ಮರೆಯಲ್ಲಿ ಕಳ್ಳ.. ಈ ನಡುವೆ ಕಳ್ಳತನ ಹಿಂಬಾಲಿಸಿ ಬರುವ ಪೊಲೀಸ್‍ ಇನ್ಸಪೆಕ್ಟರ್ ಹೀಗೆ ಒಬ್ಬರನ್ನೊಬ್ಬರು ಹಿಂಬಾಲಿಸಿ ಬಂದು, ಮನೆಯೊಂದರಲ್ಲಿ ಬಂಧಿಗಳಾಗುವ, ತಪ್ಪು ತಿಳುವಳಿಕೆಯಿಂದ ಪರದಾಡುವ ನಾಲ್ಕು ಕುಟುಂಬಗಳು. ಇವರ ನಡುವೆ ಸಿಲುಕಿಕೊಂಡ ಕಳ್ಳನ ಪೀಕಲಾಟ, ಮೋಜು, ಮಸ್ತಿ ನೋಡುಗರಿಗೆ ಹೊಟ್ಟೆ ತುಂಬಾ ನಗು ಈ ನಾಟಕದಲ್ಲಿದೆ.

ಮೇಲ್ನೋಟಕ್ಕೆಇದು ನಗೆ ನಾಟಕದಂತೆ ಕಂಡರೂ ಆಧುನಿಕತೆಯ ಸೋಗು ಹಾಕಿಕೊಂಡ ದಂಪತಿಗಳ ನೈತಿಕತೆಯನ್ನು ಪ್ರಶ್ನಿಸುವಂತೆ, ಎಲ್ಲಾ ಪಾತ್ರಧಾರಿಗಳ ಮನಸ್ಸಿನ ಬಿಂಬವಾಗಿ ಕಳ್ಳ ಕಾಣಿಸುತ್ತಾನೆ. ದಾಂಪತ್ಯ ಸಂಬಂಧಗಳ ಕೊಂಡಿ ಕಳಚಿಬಿಟ್ಟರೆ ಆಗಬಹುದಾದ ದುರಂತವನ್ನು ತಿಳಿಹಾಸ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ ನೊಬೆಲ್ ಪ್ರಶಸ್ತಿ ಪುರಸ್ಕೃತ ನಾಟಕಕಾರ ‘ದಾರಿಯೋ ಫೋ. 1958ರಲ್ಲಿ ರಚಿಸಲಾಗಿರುವ ‘ದಿ ವರ್ಚುವಸ್ ಬರ್ಗ್‍ಲರ್’ ನಾಟಕವನ್ನು ಕನ್ನಡಕ್ಕೆ ತಂದವರು ನಾಡಿನ ಹಿರಿಯ ರಂಗಕರ್ಮಿ ಕೆ.ವಿ.ಅಕ್ಷರ.

ಧನ್ಯ ಶ್ರೀಧರ್, ರಾಜಲಕ್ಷ್ಮಿ, ಅರ್ಪಿತ, ಚೈತ್ರಾ ನಾಗರಾಜ್, ಹರಿಪ್ರಸಾದ್‍ಕಶ್ಯಪ್, ಬಿ.ರಾಜೇಶ್, ರವಿಪ್ರಸಾದ್‍ ಅವರು ಅಭಿನಯಿಸಿರುವ ಈ ನಾಟಕಕ್ಕೆ ಮಹೇಶ್‍ ಕುಮಾರ್ ಬೆಳಕಿನ ವಿನ್ಯಾಸ, ರಾಘವೇಂದ್ರ ಬೂದನೂರ್ – ಸರಿತಾ ಅವರ ಪ್ರಸಾದನ, ಸುಖದೇವ್ ಸಂಗೀತ ನಿರ್ವಹಣೆ, ಹರಿಪ್ರಸಾದ್ ವಸ್ತ್ರ ವಿನ್ಯಾಸ ಮಾಡಿದ್ದಾರೆ.

ಹೆಚ್ಚಿನ ವಿವರಗಳಿಗೆ ಮೊ.9448871815/ 9964656482 ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: