ಕರ್ನಾಟಕಪ್ರಮುಖ ಸುದ್ದಿ

ಅನುಕಂಪಕ್ಕಾಗಿ ನಾಟಕ – ಸಿಎಂ ಕುಮಾರಸ್ವಾಮಿ ಆರೋಪ ; ಸುಮಲತಾ ತಿರುಗೇಟು

ಮಂಡ್ಯ (ಏ.11): ಮತದಾನಕ್ಕೆ ಇನ್ನೇರಡು ದಿನಗಳು ಬಾಕಿ ಇರುವಾಗ ಸುಮಲತಾ ಅವರು ತಾವೇ ಕಲ್ಲಲ್ಲಿ ಹೊಡೆಸಿಕೊಂಡು ತಲೆಗೆ ಪೆಟ್ಟು ಮಾಡಿಕೊಂಡು ದೊಡ್ಡ ನಾಟಕ ಮಾಡಲು ಸಿದ್ದರಾಗಿದ್ದಾರೆ. ಇದಕ್ಕಾಗಿ ಪಕ್ಷೇತರ ಅಭ್ಯರ್ಥಿ ಒಂದು ತಂತ್ರ ಮಾಡಿದ್ದಾರೆ ಎಂದು ಸುಮಲತಾ ವಿರುದ್ಧ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಗಜ್ಜಲಗೆರೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ಅವರು, ಏ.16ರಂದು ಪ್ರಚಾರದ ಕೊನೆಯ ದಿನದ ವೇಳೆ ಪಕ್ಷೇತರ ಅಭ್ಯರ್ಥಿ ತಮ್ಮ ಕಡೆಯವರಿಂದಲೇ ಕಲ್ಲು ಹೊಡೆಸಿಕೊಂಡು ಆಸ್ಪತ್ರೆಗೆ ದಾಖಲಾಗುತ್ತಾರೆ. ಈ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳಲು ಮುಂದಾಗುತ್ತಾರೆ. ಇದಕ್ಕಾಗಿ ಸುಮಲತಾ ಕಡೆಯವರೆ ನಾಟಕವಾಡಲು ಯತ್ನಿಸಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ನಿಖಿಲ್​ ಸೋಲಿಸಲು ಎಲ್ಲ ಪಕ್ಷಗಳು ಒಂದಾಗಿವೆ. ನನಗೆ ಕುತಂತ್ರ ರಾಜಕಾರಣ ಮಾಡುವ ಅಗತ್ಯವಿಲ್ಲ. ಪಕ್ಷೇತರ ಅಭ್ಯರ್ಥಿ ಇನ್ನೊಂದು ಮುಖ ನೋಡಿಲ್ಲ ಅಂತಾರೆ. ಅವರು ಬಂದಾಗ ಇನ್ನೊಂದು ಮುಖ ತೋರಿಸಿ ಎಂದು ಕೇಳಿ. ಅವರ ಬಗ್ಗೆ ನಮಗೆಲ್ಲ ಗೊತ್ತಿದೆ, ಈಗ ಆ ಚರ್ಚೆ ಬೇಡ ಎಂದು ಸಿಎಂ ಹರಿಹಾಯ್ದರು.

ನಿಖಿಲ್ ಗೆಲ್ಲಿಸುತ್ತೇನೆ ಎಂದು ನಾನು ಈ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಚಾಲನೆ ಕೊಟ್ಟಿಲ್ಲ. ನನಗೆ ಏನು ನೀವು ಆಶೀರ್ವಾದ ಮಾಡಿದ್ದೀರಿ. ಆ ಋಣ ತೀರಿಸಲು ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟಿದ್ದೇನೆ ಎಂದು ಸಮರ್ಥನೆ ನೀಡಿದರು. ಸಂದೇಶ್​ ನಾಗರಾಜ್​ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅವರ ಕೈಲಿ ‌ಒಂದು ಚುನಾವಣೆ ಗೆಲ್ಲೋಕೆ ಆಗುತ್ತಿರಲಿಲ್ಲ. ನಾನೇ ಅವರನ್ನು ವಿಧಾನ ಪರಿಷತ್ ಸದಸ್ಯ ಮಾಡಿದೆ. ಈಗ ನನ್ನ ವಿರುದ್ದವೇ ಅವನು ಹೋಟೆಲ್ ನಲ್ಲಿ ಕುಳಿತು ಚರ್ಚೆ ಮಾಡುತ್ತಾನೆ ಎಂದು ಏಕವಚನದಲ್ಲೇ ಗುಡುಗಿದರು.

ಸುಮಲತಾ ತಿರುಗೇಟು:

ಸಿಎಂ ಆರೋಪ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಅಂಬರೀಷ್​, “ನನಗೆ ನಾಟಕ ಮಾಡಿ ಏನೂ ಆಗಬೇಕಾದದ್ದಿಲ್ಲ. ಏ.16ರಂದು ಅವರೇ ಹಲ್ಲೆಗೆ ಪ್ಲಾನ್​ ಮಾಡಿಸಿರಬಹುದು. ನಮ್ಮ ಮೇಲೆ ಹಲ್ಲೆಗೆ ಅವರೇ ಸ್ಕೆಚ್​ ಹಾಕಿರಬಹುದು. ಯಾಕೆಂದರೆ ಅವರೇ ಡೇಟ್​, ಟೈಮ್​ ಹೇಳಿದ್ದಾರೆ. ಗುಪ್ತಚರ ಇಲಾಖೆಯೂ ಅವರ ಕೈಲಿದೆ ಎಂದು ತಿರುಗೇಟು ನೀಡಿದ್ದಾರೆ.

ಮಾಧ್ಯಮದವರ ಮೇಲೂ ಹಲ್ಲೆಯಾಗಲಿದೆ, ಎಚ್ಚರಿಕೆಯಿಂದ ಇರಿ ಎಂದು ಮಾಧ್ಯಮಗಳ ಮೇಲೇ ಸಿಎಂ ಬೆದರಿಕೆ ಹಾಕುತ್ತಿದ್ದಾರೆ. ಈ ರೀತಿಯಾದರೆ ಸಾಮಾನ್ಯರಾದ ನಮ್ಮ ಗತಿಯೇನು? ಇದು ಪ್ರಜಾಪ್ರಭುತ್ವ ರಾಜ್ಯವೇ ಎಂಬ ಅನುಮಾನ ಮೂಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: