ಕರ್ನಾಟಕ

ಮತದಾನದ ಮೂಲಕ ದೇಶದ ಭವಿಷ್ಯ ರೂಪಿಸೋಣ : ಚಂದನ್‍ಶೆಟ್ಟಿ

ಹಾಸನ (ಏ.11): ಯುವ ಸಮುದಾಯದಿಂದ ಅತ್ಯುತ್ತಮ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ನಾವೆಲ್ಲರೂ ತಪ್ಪದೆ ಮತ ಚಲಾಯಿಸುವ ಮೂಲಕ ಉತ್ತಮ ದೇಶದ ಭವಿಷ್ಯ ರೂಪಿಸಲು ಕೈ ಜೋಡಿಸೋಣ ಎಂದು ಬಿಗ್ ಬಾಸ್ ಖ್ಯಾತಿಯ ಹಾಗೂ ರ್ಯಾಪ್ ಗಾಯಕ ಚಂದನ್ ಶೆಟ್ಟಿ ತಿಳಿಸಿದರು.

ಲೋಕಸಭಾ ಚುನಾವಣೆ ಮತದಾರರ ಜಾಗೃತಿ ರಾಯಭಾರಿಯಾಗಿ ಜಿಲ್ಲೆಗೆ ಆಗಮಿಸಿದ ಅವರು ನಗರದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಬುಧವಾರ, ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಏ.18 ರಂದು ಪ್ರತಿಯೊಬ್ಬ ನಾಗರೀಕನೂ ತಪ್ಪದೇ ಕಡ್ಡಾಯವಾಗಿ ಮತ ಚಲಾಯಿಸುವುದರಿಂದ ಒಂದು ಉತ್ತಮ ದೇಶದ ಭವಿಷ್ಯವನ್ನು ನಿರ್ಮಿಸೋಣ ಎಂದು ತಿಳಿಸಿದರು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇಂದು ಹಣ ಆಮಿಷಗಳಿಗೆ ಒಳಗಾದರೆ ಮುಂದೆ ನಾವೇ ಪಶ್ಚತಾಪ ಪಡುವಂತಹ ಪರಿಸ್ಥಿತಿ ಬರುತ್ತದೆ. ನಮ್ಮ ಹಕ್ಕನ್ನು ವಿವೇಚನೆಯಿಂದ ಚಲಾಯಿಸೋಣ ದೇಶದ ಉಜ್ವಲ ಭವಿಷ್ಯಕ್ಕೆ ಭಾಗಿಗಳಾಗೋಣ ಎಂದು ಯುವ ಸಮುದಾಯಕ್ಕೆ ಚಂದನ್‍ಶೆಟ್ಟಿ ಅವರು ಹೇಳಿದರು.
ಇಂದಿನ ಯುವ ಸಮುದಾಯ ಮತ ಚಲಾಯಿಸುವ ಮೂಲಕ ತಮ್ಮ ಸುತ್ತ-ಮುತ್ತಲಿನ ಜನತೆಗೂ ಕೂಡ ಮತದಾನದ ಅರಿವು ಮೂಡಿಸುವ ಕಾರ್ಯ ಮಾಡಬೇಕು ನಮ್ಮಿಂದ ಇತರರು ಮತದಾನದಂತಹ ಪವಿತ್ರವಾದ ಕಾರ್ಯದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಮಾತನಾಡಿ ನಮ್ಮ ಮತದಾನದಿಂದ ದೃಢ ಭಾರತ ನಿರ್ಮಾಣ ಸಾಧ್ಯವಾಗುವುದು ಈ ಒಂದು ಅವಕಾಶವನ್ನು ನಮಗೆ ನೀಡಿದಂತಹ ನಮ್ಮ ಭಾರತ ದೇಶಕ್ಕೆ ಮತದಾನ ಮಾಡುವ ಮೂಲಕ ನಮ್ಮ ಕರ್ತವ್ಯವನ್ನು ನಿರ್ವಹಿಸೋಣ ಎಂದು ಹೇಳಿದರು.

ಇಂದಿನ ಯುವ ಸಮುದಾಯವೇ ಮತದಾನದಿಂದ ಹಿಂದೆ ಸರಿಯುತ್ತಿದ್ದಾರೆ ಯುವ ಪೀಳಿಗೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ರೀತಿ ಮತದಾರರ ಜಾಗೃತಿ ಜಾಥಾ ಮಾಡುತ್ತಿದ್ದು, ಪ್ರತಿಯೊಬ್ಬ ಯುವಕರು ಏ.18 ರಂದು ಮತದಾನ ಮಾಡುವ ಮೂಲಕ ಈ ರೀತಿ ಕಾರ್ಯಕ್ರಮಗಳನ್ನು ಸಾರ್ಥಕಗೊಳಿಸೋಣ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಡಾ.ಕೆ.ಎನ್. ವಿಜಯ್ ಪ್ರಕಾಶ್ ಅವರು ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳಾದ ಪುಟ್ಟಸ್ವಾಮಿ, ಯೋಜನಾ ನಿರ್ದೇಶಕರಾದ ಪರಪ್ಪಸ್ವಾಮಿ, ಮಲ್ನಾಡು ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಂತ್, ಸ್ವೀಪ್ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ವಾರ್ತಾಧಿಕಾರಿಗಳಾದ ವಿನೋದ್ ಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: