ಮೈಸೂರು

ಮೈಸೂರಿನಲ್ಲಿ ಶ್ರದ್ಧಾಭಕ್ತಿಯಿಂದ ರಾಮನವಮಿ ಆಚರಣೆ : ಭಕ್ತರಿಗೆ ಪಾನಕ,ಮಜ್ಜಿಗೆ ವಿತರಣೆ

ಮೈಸೂರು,ಏ.13:- ಚೈತ್ರ ಮಾಸದ ಶುಕ್ಲಪಕ್ಷದ ನವಮಿಯ ದಿನವನ್ನು ಶ್ರೀರಾಮನವಮಿ ಎಂದು ಆಚರಿಸಲಾಗುತ್ತದೆ. ಧರ್ಮಶಾಸ್ತ್ರಗಳ ಪ್ರಕಾರ ತ್ರೇತಾಯುಗದಲ್ಲಿ ಮಹಾರಾಜ ದಶರಥನ ಮನೆಯಲ್ಲಿ ವಿಷ್ಣುವಿನ ಅವತಾರ ಭಗವಾನ್ ಶ್ರೀರಾಮನ ಜನನವಾಗುತ್ತದೆ. ಅದಕ್ಕಾಗಿಯೇ ಇಂದು ಶ್ರೀರಾಮನವಮಿಯನ್ನು ಜನತೆ ಅತ್ಯಂತ ಶ್ರದ್ಧಾಭಕ್ತಿ-ಸಡಗರ ಸಂಭ್ರಮಗಳಿಂದ ಆಚರಿಸುತ್ತಾರೆ. ಇಂದು ನಾಡಿನೆಲ್ಲೆಡೆ ಶ್ರೀರಾಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ.

ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿ ಪುನರ್ವಸು ನಕ್ಷತ್ರದ ಕರ್ಕ ಲಗ್ನದಲ್ಲಿ ಶ್ರೀರಾಮ ಜನ್ಮ ತಾಳುತ್ತಾನೆ. ರಾಮನವಮಿಯಂದು ತಾಯಿ ದುರ್ಗಾಮಾತೆಯ ಒಂಭತ್ತು ರೂಪಗಳ ಜೊತೆ ಮಹಾಗೌರಿ,   ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪೂಜೆಯನ್ನು ಕೂಡ ನಡೆಸಲಾಗುತ್ತದೆ. ಭಕ್ತರನೇಕರು ಈ ದಿನ ಉಪವಾಸವಿದ್ದು, ರಾಮನಾಮದ ಜಪದಲ್ಲಿ ತಲ್ಲೀನರಾಗಿರುತ್ತಾರೆ.

ಮೈಸೂರಿನ ಆಂಜನೇಯ ದೇವಾಲಯಗಳಲ್ಲಿ ಹಾಗೂ ಶ್ರೀರಾಮನ ದೇವಾಲಯಗಳಲ್ಲಿ  ಹಾಗೂ ದುರ್ಗಾಮಾತೆಯ ದೇವಾಲಯಗಳಲ್ಲಿ ಶ್ರದ್ದಾಭಕ್ತಿಯಿಂದ ಇಂದು ಶ್ರೀರಾಮ ನವಮಿಯನ್ನು ಆಚರಿಸಲಾಯಿತು. ಹಲವೆಡೆ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಪ್ರಸಾದದ ರೂಪದಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ಗಳನ್ನು ವಿತರಿಸಲಾಯಿತು. ವಿವಿಧ ಸಂಘಟನೆಗಳು, ರಿಕ್ಷಾ ಚಾಲಕರು ರಾಮನವಮಿಯಲ್ಲಿ ಪಾಲ್ಗೊಂಡು ತಮ್ಮ ಸೇವೆಯನ್ನು ಸಲ್ಲಿಸುತ್ತಿರುವುದು ಕಂಡು ಬಂತು.

ಇಂದು ಬೆಳಿಗ್ಗೆ 8.16ರ ಬಳಿಕವೇ ನವಮಿ ತಿಥಿ ಬಂದಿದ್ದು, ನಾಳೆ ಬೆಳಿಗ್ಗೆ 6ಗಂಟೆಯವರೆಗೆ ಇರಲಿದೆ. ನವಮಿ ತಿಥಿಯಲ್ಲಿ ನವರಾತ್ರಿಗೆ ಸಂಬಂಧಿಸಿದ ಹವನ, ಹೋಮ, ಪೂಜೆಗಳನ್ನು ಕೂಡ ನಡೆಸಲಾಗುತ್ತದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: