ಪ್ರಮುಖ ಸುದ್ದಿಮೈಸೂರು

ಹಿಂದುಳಿದವರಿಗೆ ಅವಕಾಶ ನೀಡದ ಬಿಜೆಪಿ : ಒಕ್ಕೂಟದಿಂದ ಟೀಕೆ

ಮೈಸೂರು, ಏ. 13 : ರಾಜ್ಯದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ವೇಳೆ 27 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಅವರಲ್ಲಿ ಹಿಂದುಳಿದ ವರ್ಗದ ಒಬ್ಬರಿಗೂ ಅವಕಾಶ ನೀಡದಿರುವ ಹಾಗೂ ಕಳೆದ ಬಾರಿ ನೀಡಿದ ಆಶ್ವಾಸನಗಳಲ್ಲಿ ಒಂದನ್ನೂ ಈಡೇರಿಸದ ಬಿಜೆಪಿಗೆ ಹಿಂದುಳಿದವರು ಮತ ನೀಡಬಾರದೆಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮನವಿ ಮಾಡಿತು.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, ಕಳೆದ ಐದು ವರ್ಷಗಳಲ್ಲಿ ಕೇಂದ್ರದಲ್ಲಿನ ಬಿಜೆಪಿ ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರನ್ನು ಕಡೆಗಣಿಸಿದ್ದು, ಈಗ ಮೇಲ್ವರ್ಗದವರಿಗೆ ಶೇ. 10 ಮೀಸಲಾತಿ ಘೋಷಿಸಿದೆ. ಇದು ಸಹಾ ಈ ಎಲ್ಲ ವರ್ಗಗಳನ್ನು ವಂಚಿಸಿ, ಕೇವಲ ಬ್ರಾಹ್ಮಣರು, ವೈಶ್ಯರಿಗೆ ಮಾತ್ರ ಅನುಕೂಲ ಕಲ್ಪಿಸುವಂತದ್ದಾಗಿದೆ ಎಂದು ದೂರಿದರು.

ಅಲ್ಲದೆ, ಈ ಹಿಂದೆ ಅಧಿಕಾರಕ್ಕೆ ಬರುವ ವೇಳೆ ಸ್ವಿಸ್ ಬ್ಯಾಂಕ್‌ಗಳಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ ಹದಿನೈದು ಲಕ್ಷ ಹಾಕುವುದಾಗಿ ತಿಳಿಸಿದ್ದವರು ಹದಿನೈದು ಪೈಸೆಯನ್ನೂ ತಂದಿಲ್ಲ. ಅವರ ಜಿಎಸ್‌ಟಿಯಿಂದಾಗಿ, ನೋಟು ಅಮಾನ್ಯೀಕರಣದಿಂದಾಗಿ ಸಣ್ಣಪುಟ್ಟ ವ್ಯಾಪಾರಿಗಳು, ಬಡಜನರಿಗೆ ತೊಂದರೆಯಾಗಿದೆ ಎಂದು ಹೇಳಿದರು.

ಇನ್ನು, ಬಿಜೆಪಿಯಿಂದಾಗಿ ನಗರಸಭೆ, ಪುರಸಭೆ, ಜಿಪಂ, ತಾಪಂ, ಗ್ರಾಪಂಗಳಲ್ಲಿ ಹಿಂದುಳಿದವರ ಪ್ರಾತಿನಿಧ್ಯಕ್ಕೆ ಧಕ್ಕೆ ಬಂದಿದ್ದು, ಅವಕಾಶ ವಂಚಿತರನ್ನಾಗಿಸಲಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ನಿರ್ಲಕ್ಷಿಸಿ, ಕೇವಲ ಹಿಂದುಳಿದ ವರ್ಗದ ಅಭ್ಯರ್ಥಿಗಳನ್ನೇ ಬೆಂಬಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಚೌಹಳ್ಳಿ ಪುಟ್ಟಸ್ವಾಮಿ, ನಾರಾಯಣಗೌಡ, ಸುಬ್ರಮಣ್ಯ, ಕೆ.ಎಸ್. ಶಿವರಾಮು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: