ಮೈಸೂರು

ನಮ್ಮತನ ಬಿಟ್ಟು ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿದ್ದೇವೆ :ಸುರೇಂದ್ರ ಕೌಲಗಿ ಬೇಸರ

ನಾವು ನಮ್ಮ ತನವನ್ನು ಬಿಟ್ಟು ಬೇರೆ ಸಂಸ್ಕೃತಿಗಳಿಗೆ ಮಾರು ಹೋಗುತ್ತಿದ್ದೇವೆ, ದೇಶದಲ್ಲಿ ಎಲ್ಲವೂ ವಿದೇಶಿಗಳ ಕೈ ಕೆಳಗಿದೆ, ನಾವು ನಮ್ಮದೆಲ್ಲವನ್ನೂ ಅವರಿಗೆ ನೀಡಿ ಅವರ ಕೆಳಗೆ ಕೆಲಸ ಮಾಡುತ್ತಿದ್ದೇವೆ, ಸರ್ಕಾರವೂ ವಿದೇಶಿ ವಿವಿಗಳನ್ನು ಭಾರತದಲ್ಲಿ ಸ್ಥಾಪನೆ ಮಾಡುವು ಮೂಲಕ ನಮ್ಮ ತನಕ್ಕೆ ತಿಲಾಂಜಲಿ ಹಾಕುತ್ತಿದೆ ಎಂದು ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಸುರೇಂದ್ರ ಕೌಲಗಿ ಬೇಸರ ವ್ಯಕ್ತಪಡಿಸಿದರು.

ಮೈಸೂರು ಜೆ.ಎಲ್.ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಸಮುದಾಯ ಮೈಸೂರು ವತಿಯಿಂದ ಹುತಾತ್ಮ ದಿನಾಚರಣೆಯ ಅಂಗವಾಗಿ ಸೋಮವಾರ ಕಳೆದು ಹೋಗುತ್ತಿರುವ ಗಾಂಧಿ, ಆವರಿಸಿಕೊಳ್ಳುತ್ತಿರುವ ಗೋಡ್ಸೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದೇಶಿ ವಿವಿಗಳು ಬಂದು ನಮ್ಮವರನ್ನೇ ನಮ್ಮವರ ಎದುರು ಪರಕೀಯರನ್ನಾಗಿ ಮಾಡುತ್ತಿವೆ, ಇವುಗಳನ್ನು ವಿರೋದಿಸುವ ಜನ ಮರೆಯಾಗುತ್ತಿದ್ದಾರ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜಕೀಯ ಬೇಳೆ ಬೇಯಿಸುಕೊಳ್ಳುವ ಉದ್ದೇಶದಿಂದ ಗಾಂಧಿ, ಅಂಬೇಡ್ಕರ್ ಹಾಗೂ ಜಯಪ್ರಕಾಶ ನಾರಾಯಣ್ ಅವರನ್ನು ಹೈಜಾಕ್ ಮಾಡುತ್ತಿದ್ದು, ಗಾಂಧೀ, ಅಂಬೇಡ್ಕರ್ ಭಾವಚಿತ್ರಗಳಿರುತ್ತಿದ್ದ ಕ್ಯಾಲೆಂಡರ್ ಸೇರಿದಂತೆ ಹಲವೆಡೆ ಮೋದಿ  ಚಿತ್ರ ಆವರಿಸಿದೆ ಎಂದರು. ಅಕ್ಟೋಬರ್ 2 ಗಾಂಧೀ ಜಯಂತಿಯಂದು ದೆಹಲಿಯ ರಾಜ್‍ಘಾಟ್‍ಗೆ ಹೋಗಿ ಹೂಗುಚ್ಛ ಇಟ್ಟು ಸ್ಮರಿಸಿಕೊಂಡ ಮಾತ್ರಕ್ಕೆ ಯಾರೂ ಗಾಂಧೀವಾದಿಗಳಾಗುವುದಿಲ್ಲ. ಗಾಂಧೀ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಹುತಾತ್ಮರ ದಿನಾಚರಣೆಯ ವೇಳೆ ದಿನೇ ದಿನೇ ಹಿಮಪಾತದಿಂದ ಸಾಯುತ್ತಿರುವ ಸೈನಿಕರನ್ನೂ ಸ್ಮರಿಸುವ ಕೆಲಸವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮೈವಿವಿ ಪ್ರಾದ್ಯಾಪಕ ಪ್ರೊ. ಮುಜಾಫರ್ ಅಸಾದಿ, ಕರ್ನಾಟಕ ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ಕೆ.ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: