ಪ್ರಮುಖ ಸುದ್ದಿ

ಕೊಡಗಿಗೆ ವಿಜಯಶಂಕರ್ ಕೊಡುಗೆ ಶೂನ್ಯ : ಎಂಎಲ್‍ಸಿ ಸುನಿಲ್ ಸುಬ್ರಮಣಿ ಟೀಕೆ

ರಾಜ್ಯ(ಮಡಿಕೇರಿ )ಏ.15 :- ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರು ಈ ಹಿಂದೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ ಏನು ಎಂಬುವುದನ್ನು ಮೊದಲು ಸಾಬೀತುಪಡಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಎಂ.ಪಿ.ಸುನಿಲ್ ಸುಬ್ರಮಣಿ ಸವಾಲೆಸೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮನಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ, ಸಿ.ಹೆಚ್.ವಿಜಯಶಂಕರ್ ಅವರು, ಅರಣ್ಯ ಸಚಿವರಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದರು. ಅದೊಂದು ಪ್ರಭಾವಿ ಖಾತೆಯಾಗಿದ್ದರು ಮತ್ತು ಉಸ್ತುವಾರಿ ಜವಾಬ್ದಾರಿ ಹೊಂದಿದ್ದರು ಜಿಲ್ಲೆಗೆ ಯಾವುದೇ ಲಾಭವನ್ನು ಮಾಡಿಕೊಡದವರು ಇದೀಗ ಸಂಸದರಾಗಿ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ವಿಜಯಶಂಕರ್ ಅವರನ್ನು ತಮ್ಮೊಂದಿಗೆ ಆತ್ಮೀಯರಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಬಿ.ಎಸ್.  ಯಡಿಯೂರಪ್ಪ ಅವರು ಎಂಎಲ್‍ಸಿ ಸ್ಥಾನ ನೀಡಿ,  ಅರಣ್ಯ  ಮಂತ್ರಿ ಮಾಡಿದ್ದರು. ಬಿಜೆಪಿಯಿಂದ ಎಲ್ಲವನ್ನು ಅನುಭವಿಸಿದ್ದ ವಿಜಯಶಂಕರ್ ಅವರು, ಒಬ್ಬ ಬಿಜೆಪಿಯ ಫಲಾನುಭವಿ ಎಂದು ಸುನಿಲ್ ಸುಬ್ರಮಣಿ ವ್ಯಂಗ್ಯವಾಡಿದರು.

ಬಿಜೆಪಿ ಅಭ್ಯರ್ಥಿಯನ್ನು ಟೀಕಿಸುವ ಮೊದಲು ತಾವು ಮಾಡಿರುವ ಸಾಧನೆಯನ್ನು ಮೊದಲು ಬಹಿರಂಗ ಪಡಿಸಲಿ ಎಂದರು. ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಅಲೆ ವ್ಯಾಪಕವಾಗಿದ್ದು, ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಗೆಲುವು ನಿಶ್ಚಿತವಾಗಿದೆ. ಕೇಂದ್ರ ಸರ್ಕಾರ ಹಗರಣ ಮುಕ್ತ ಆಡಳಿತವನ್ನು ನೀಡುವ ಮೂಲಕ ಜನ ಮೆಚ್ಚುಗೆಯನ್ನು ಗಳಿಸಿದೆ. ಆದರೆ, ರಾಜ್ಯದ ಮೈತ್ರಿ ಸರ್ಕಾರದ ಅವಧಿಯಲ್ಲಿ ವಿಧಾನಸೌಧದಲ್ಲಿ ಲಕ್ಷ ಲಕ್ಷ ಹಣ ದೊರೆತಿದೆ. ದೇಶದ ಸುಭದ್ರತೆಯ ಅನಿವಾರ್ಯತೆಯ ಕಾಲ ಇದಾಗಿದ್ದು, ಮೋದಿಯವರ ಕೈಯನ್ನು ಬಲ ಪಡಿಸಲು ಬಿಜೆಪಿ ಅಭ್ಯರ್ಥಿಯನ್ನು ಜನರು ಬೆಂಬಲಿಸಲಿದ್ದಾರೆ ಎಂದರು. ರಸ್ತೆ ಮತ್ತು ಚರಂಡಿ ನಿರ್ಮಾಣವನ್ನು ಸ್ಥಳೀಯ ಸಂಸ್ಥೆಗಳು ಮಾಡುತ್ತವೆ. ಮೂಲಭೂತ ಸೌಲಭ್ಯ ಒದಗಿಸುವುದು ಸಂಸದರ ಕೆಲಸವಲ್ಲ. ಲೋಕಸಭಾ ಸದಸ್ಯ ಸ್ಥಾನದ ಘನತೆಗೆ ತಕ್ಕಂತೆ ಪ್ರತಾಪ ಸಿಂಹ ಕಾರ್ಯ ನಿರ್ವಹಿಸಿದ್ದಾರೆ. ಮಹಿಳೆಯರು ಮತ್ತು ಯುವ ಮತದಾರರ ಒಲವು ಗಳಿಸಿಕೊಂಡಿದ್ದಾರೆ. ಕೊಡಗಿನಲ್ಲಿ 75 ಸಾವಿರಕ್ಕೂ ಅಧಿಕ ಮತಗಳ ಅಂತರವನ್ನು ಪ್ರತಾಪ ಸಿಂಹ ಅವರಿಗೆ ಜನ ನೀಡಲಿದ್ದಾರೆ ಎಂದು ಸುನಿಲ್ ಸುಬ್ರಮಣಿ ವಿಶ್ವಾಸ ವ್ಯಕ್ತಪಡಿಸಿದರು.

ಜಾತಿ ನೋಡದೆ ಪ್ರತಿ ಮನೆಗೆ ಅಡುಗೆ ಅನಿಲದ ಸಿಲಿಂಡರ್ ನೀಡಲಾಗಿದೆ. ನೋಟು ಅಮಾನ್ಯೀಕರಣದಿಂದ ಭ್ರಷ್ಟಾಚಾರದ ನಿರ್ಮೂಲನೆಗೆ ಪಣತೊಡಲಾಗಿದೆ. ಶತ್ರುಗಳನ್ನು ಹಿಮ್ಮೆಟ್ಟಿಸಲು ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ.ಆದ್ದರಿಂದ ಜನ ಬೆಂಬಲ ಬಿಜೆಪಿಯ ಪರವಾಗಿದೆಯೆಂದು ಅವರು ಅಭಿಪ್ರಾಯಪಟ್ಟರು. ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರು ಕೊಡಗಿನ ಅಳಿಯ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಟಿಪ್ಪು ಜಯಂತಿ ಮೂಲಕ ಕೊಡಗಿಗೆ ಅಪಮಾನವಾದಾಗ ಇವರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು. ಮೈತ್ರಿ ಸರ್ಕಾರಕ್ಕೆ ಟಿಪ್ಪು ಜಯಂತಿ ಮಾಡಲು ಹಣವಿದೆ ಹಂಪಿ ಉತ್ಸವ ಮಾಡಲು ಹಣವಿಲ್ಲವೆಂದು ಸುನಿಲ್ ಸುಬ್ರಮಣಿ ಟೀಕಿಸಿದರು.

ಸುಮಾರು 545 ಸದಸ್ಯರು ಲೋಕಸಭೆಯನ್ನು ಪ್ರತಿನಿಧಿಸುತ್ತಿದ್ದು, ಪ್ರತಿಯೊಬ್ಬರಿಗು ಸಂಸತ್‍ನಲ್ಲಿ ಮಾತನಾಡಲು ಅವಕಾಶ ಸಿಗುವುದು ಕಷ್ಟ ಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಸುಮಾರು 20 ನಿಮಿಷಗಳ ಕಾಲ ಕೊಡಗಿನ ಮಳೆಹಾನಿ ನಷ್ಟದ ಕುರಿತು ಪ್ರತಾಪ ಸಿಂಹ ಅವರು ಪರಿಣಾಮಕಾರಿಯಾಗಿ ಸರ್ಕಾರದ ಗಮನ ಸೆಳೆದಿದ್ದಾರೆಂದು ಸುನಿಲ್ ಸಮರ್ಥಿಸಿಕೊಂಡರು.

ಪಕ್ಷದ ಜಿಲ್ಲಾ ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ ಮಾತನಾಡಿ, ವಿಜಯಶಂಕರ್ ಅವರು, ಅರಣ್ಯ ಸಚಿವರಾಗಿದ್ದಾಗ ಜಿಲ್ಲೆಯ ಶಾಸಕರು ಹಾಗೂ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಗಾಡ್ಗಿಲ್ ವರದಿ ಹಾಗೂ ಸೂಕ್ಷ್ಮ ಪರಿಸರ ವಲಯದ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿದ್ದರು, ಇವರು ಕೊಡಗಿನ ಶತ್ರು ಎಂದು ಆರೋಪಿಸಿದರು. ಎರಡು ಹೊತ್ತು ಊಟಕ್ಕೆ ಇಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ಮಖ್ಯಮಂತ್ರಿಗಳು ನೀಡಿರುವ ಹೇಳಿಕೆಯನ್ನು ಖಂಡಿಸುವುದಾಗಿ ತಿಳಿಸಿದ ಅವರು, ಇದು ಭಾರತೀಯ ಸೇನಾಪಡೆ ಮತ್ತು ಸೇನಾ ಜಿಲ್ಲೆ ಕೊಡಗಿಗೆ ಮಾಡಿದ ಅಪಮಾನವಾಗಿದೆಯೆಂದು ಅಭಿಪ್ರಾಯಪಟ್ಟರು. ಕುಮಾರಸ್ವಾಮಿ ಅವರು ಜಿಲ್ಲೆಗೆ ಭೇಟಿ ನೀಡುವ ಸಂದರ್ಭ ಮಾಜಿ ಸೈನಿಕರ ಮೂಲಕ ಕಪ್ಪು ಬಾವುಟ ಪ್ರದರ್ಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ ಮಾತನಾಡಿ, ಪ್ರತಾಪ ಸಿಂಹ ಅವರು ಕಳೆದ 5 ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಹಂಚಿಕೆ ಮಾಡಿರುವ ಅನುದಾನದ ಬಗ್ಗೆ ಬಹಿರಂಗವಾಗಿ ಅಧಿಕೃತ ಪ್ರಕಟಣೆ ನೀಡಿದ್ದಾರೆ. ಆದರೂ ಮೈತ್ರಿ ಪಕ್ಷದ ಮಂದಿ ಪ್ರತಾಪ ಸಿಂಹ ಏನು ಮಾಡಿದ್ದಾರೆಂದು ಪ್ರಶ್ನಿಸುತ್ತಲೇ ಇದ್ದಾರೆ. ಈ ಪ್ರಶ್ನೆಗೆ ಚುನಾವಣೆಯ ಸಂದರ್ಭ ಜಿಲ್ಲೆಯ ಜನರೆ ಸರಿಯಾದ ಉತ್ತರ ನೀಡಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪÀಡಿಸಿದರು.

ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಸಂತ್ರಸ್ತರ ನೆರವಿಗೆ ಧಾವಿಸಿದ ಪ್ರತಾಪ ಸಿಂಹ ಹಾನಿ ಪ್ರದೇಶದಲ್ಲಿ ಹಾಜರಿದ್ದರು ಆದರೆ, ವಿಜಯಶಂಕರ್ ಆ ಸಂದರ್ಭದಲ್ಲಿ ಎಲ್ಲಿದ್ದರು ಎಂದು ರವಿ ಕಾಳಪ್ಪ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಉಮೇಶ್ ಸುಬ್ರಮಣಿ, ಮನು ಮಂಜುನಾಥ್ ಹಾಗೂ ನಗರಾಧ್ಯಕ್ಷ ಮಹೇಶ್ ಜೈನಿ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

 

Leave a Reply

comments

Related Articles

error: