ದೇಶ

ದೊಡ್ಡಣ್ಣನಿಂದ ಛೀಮಾರಿ ಹಾಕಿಸಿಕೊಂಡ ಪಾಕ್

ಪಾಕಿಸ್ತಾನವನ್ನು ಭಯೋತ್ಪಾದನೆ ಉತ್ತೇಜಕ ರಾಷ್ಟ್ರವೆಂಬ ಹಣೆಪಟ್ಟಿ ಕಟ್ಟುವಂತೆ ಅಮೆರಿಕ ಸಂಸತ್ತಿನಲ್ಲಿ ಇಬ್ಬರು ಸಂಸದರು ವಿಧೇಯಕವನ್ನು ಮಂಡಿಸಿದ್ದಾರೆ.

ಪಾಕಿಸ್ತಾನ ನಂಬಿಕೆಗೆ ಅನರ್ಹವಾದ ರಾಷ್ಟ್ರ. ಹಲವಾರು ವರ್ಷಗಳಿಂದ ಅಮೆರಿಕಾ ಶತ್ರುಗಳನ್ನು ಸಲಹುತ್ತಾ ಬಂದಿರುವುದೇ ಇದಕ್ಕೆ ಸ್ಪಷ್ಟ ನಿದರ್ಶನ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ನಿಲುವು ಸ್ಪಷ್ಟವಾಗಿ ಗೋಚರಿಸಿದೆ. ಹಾಗಾಗಿ ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ನೆರವನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ ಎಂದು ವಿಧೇಯಕ ಮಂಡಿಸಿದ ಸಂಸದ ಟೆಡ್ ಪೋ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಟೆಡ್ ಪೋ ಭಯೋತ್ಪಾದನೆ ನಿಗ್ರಹ ಸಮಿತಿ ಅಧ್ಯಕ್ಷರೂ ಆಗಿದ್ದಾರೆ. ಒಸಾಮಾ ಬಿನ್ ಲಾಡೆನ್ ಗೆ ಆಶ್ರಯ ನೀಡಿರುವುದರಿಂದ ಹಿಡಿದು ಹಕ್ವಾನಿ ನೆಟ್ವವರ್ಕ್ ಜತೆಗಿನ ಸಂಬಂಧದವರೆಗೆ ಪಾಕಿಸ್ತಾನದ ಉಗ್ರ ಪರ ನಡೆ ಬಗ್ಗೆ ಸ್ಪಷ್ಟಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಕೂಡ ಪೋ ತಿಳಿಸಿದ್ದಾರೆ. ಅಮೆರಿಕ ಸಂಸತ್ತು ನಾಲ್ಕು ತಿಂಗಳೊಳಗೆ ಈ ವಿಧೇಯಕದ ಕುರಿತು ತೀರ್ಮಾನ ಕೈಗೊಳ್ಳಲಿದೆ.

ಇನ್ನು, ಉರಿ ದಾಳಿ ಬಳಿಕ ಪಾಕಿಸ್ತಾನಕ್ಕೆ ಒಂದಾದ ಮೇಲೊಂದರಂತೆ ಸಂಕಷ್ಟ ಆರಂಭವಾಗಿದೆ. ಭಾರತದ ಮನವಿ ಮೇರೆಗೆ ರಷ್ಯಾ ಪಾಕಿಸ್ತಾನದೊಂದಿಗೆ ನಿಗದಿ ಮಾಡಿದ್ದ ಜಂಟಿ ಸೇನಾ ತಾಲೀಮನ್ನು ಈಗಾಗಲೇ ರದ್ದುಗೊಳಿಸಿದೆ. ಈಗ ಅಮೆರಿಕ ಕೂಡ ಉಗ್ರರ ಪರ ನಿಲುವಿಗೆ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನವಾಜ್ ಷರಫ್ ಅವರೊಂದಿಗಿನ ಮಾತುಕತೆಯನ್ನು ರದ್ದುಗೊಳಿಸಿದ್ದಾರೆ ಎಂಬ ಮಾಹಿತಿಯೂ ಬಹಿರಂಗವಾಗಿದೆ.

ಭಾರತೀಯ ಸೇನಾನೆಲೆ ಉರಿ ಮೇಲೆ ನಡೆದಿರುವ ಉಗ್ರರ ದಾಳಿಯನ್ನು ಆಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ತೀವ್ರವಾಗಿ ಖಂಡಿಸಿದ್ದಾರೆ. ವಿಶ್ವಸಂಸ್ಥೆಯ 71ನೇ ಅಧಿವೇಶನದ ನೇಪಥ್ಯದಲ್ಲಿ ಕೆರಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ವೇಳೆ ಉಗ್ರರು ಪಾಕ್ ನೆಲದಲ್ಲಿ ಆಶ್ರಯ ಪಡೆಯುತ್ತಿರುವುದನ್ನು ತಡೆಗಟ್ಟಲು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಗೆ ಆಗ್ರಹಿಸಿದ್ದಾರೆ. ಇದನ್ನೆಲ್ಲ ಗಮನಿಸಿದಾಗ ವಿಶ್ವಮಟ್ಟದಲ್ಲೇ ಪಾಕ್ ಮಾನ ಹರಾಜಾಗುವುದು ಖಚಿತವಾದಂತಾಗಿದೆ.

Leave a Reply

comments

Related Articles

error: