ಕರ್ನಾಟಕಪ್ರಮುಖ ಸುದ್ದಿ

ಮಂಡ್ಯ: ಬಣ್ಣಗಳಲ್ಲಿ ಅರಳಿದ ಮತದಾನ ಜಾಗೃತಿ ಚಿತ್ರಗಳು

ಮಂಡ್ಯ (ಏ.15): ಲೋಕಸಭಾ ಚುನಾವಣೆ ಪ್ರಯುಕ್ತ ಚಿತ್ರಕಲಾ ಶಿಕ್ಷಕರಿಗಾಗಿ ಶನಿವಾರ ನಗರದ ಕಾವೇರಿ ವನದಲ್ಲಿ ಏರ್ಪಡಿಸಿದ್ದ ಚಿತ್ರ ರಚನೆ ಸ್ಪರ್ಧೆಯಲ್ಲಿ ಮತದಾನ ಜಾಗೃತಿ ಕುರಿತು ಬಗೆಬಗೆಯ ಚಿತ್ರಗಳು ಬಣ್ಣಗಳಲ್ಲಿ ಅರಳಿದವು.

ಮತದಾನ ಜಾಗೃತಿ ಚಿತ್ರಕಲೆಯಲ್ಲಿ ನಿರತರಾಗಿರುವ ಕಲಾವಿದರು.

ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸ್ಪರ್ಧೆಯನ್ನು ಕ್ಯಾನ್ವಾಸ್ ಮೇಲೆ ಚಿತ್ರಿಸಲಾಗಿದ್ದ ಕೈ ಬೆರಳಿಗೆ ಶಾಹಿಯನ್ನು ಹಚ್ಚುವ ಮೂಲಕ ಜಿಲ್ಲಾಧಿಕಾರಿ ಡಾ.ಪಿ.ಸಿ. ಜಾಫರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಪಿ.ಸಿ. ಜಾಫರ್ ಅವರು, ಜನರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ ವತಿಯಿಂದ ವಿಶಿಷ್ಟ ಮತ್ತು ಕ್ರೀಯಾಶೀಲ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮತದಾನ ಜಾಗೃತಿ ಚಿತ್ರಗಳು ಬಣ್ಣಗಳಲ್ಲಿ ಅರಳುತ್ತಿರುವುದು ಖುಷಿ ತಂದಿದೆ. ಇದೊಂದು ಒಳ್ಳೆಯ ಪ್ರಯತ್ನ ಎಂದು ಶ್ಲಾಘಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 25ಕ್ಕೂ ಹೆಚ್ಚು ಶಿಕ್ಷಕರು ಸ್ಪರ್ಧೆಯಲ್ಲಿ ಪಾಲ್ಗೊಂಡು ಮತದಾನ ಮಹತ್ವ ಕುರಿತು ಮನದಲ್ಲಿ ಮೂಡಿದ ಭಾವನೆಗಳಿಗೆ ಬಣ್ಣ ತುಂಬುವ ಮೂಲಕ ಚಿತ್ರಗಳಿಗೆ ಜೀವ ತುಂಬಿ, ಸೌಂದರ್ಯ ಹೆಚ್ಚಿಸಿದರು. ಅಲ್ಲದೆ, ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸುವ ಚಿತ್ರಗಳನ್ನು ರಚಿಸಿದರು.

ಕಲಾವಿದರು ಚಿತ್ರ ರಚಿಸಿ, ಬಣ್ಣಗಳನ್ನು ತುಂಬುತ್ತಿದ್ದರು. ಅಲ್ಲೊಂದು ಬಣ್ಣದ ಲೋಕವೇ ಸೃಷ್ಟಿಯಾಗಿತ್ತು. ನೂರಾರು ಜನರು ಆಸಕ್ತಿ, ಕೂತುಹಲದಿಂದ ವೀಕ್ಷಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಘುನಂದನ್ ಸೇರಿದಂತೆ ಹಲವರು ಸಮಾರಂಭದಲ್ಲಿ ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: