ಪ್ರಮುಖ ಸುದ್ದಿ

ಸಂವಿಧಾನದ ನೆರವಿನಿಂದ ದೇಶ ಅಭಿವೃದ್ಧಿಯಾಗಿದೆ : ಮೊಗೇರ ಸೇವಾ ಸಮಾಜದ ಅಧ್ಯಕ್ಷ ಬಿ.ಶಿವಪ್ಪ ಅಭಿಮತ

ರಾಜ್ಯ(ಮಡಿಕೇರಿ) ಏ.15 :- ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ನೆರವಿನಿಂದ ಭಾರತೀಯರು ಆರ್ಥಿಕವಾಗಿ ಸಬಲರಾಗಿದ್ದು, ಇದು ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಬಿ.ಶಿವಪ್ಪ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾ ಮೊಗೇರ ಸೇವಾ ಸಮಾಜದ ವತಿಯಿಂದ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 128 ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದಲ್ಲಿರುವ ಸಂವಿಧಾನದ ಶಕ್ತಿಯಿಂದ ಸರ್ವರೂ ಆರ್ಥಿಕವಾಗಿ ಸಬಲರಾಗಲು ಅವಕಾಶ ದೊರೆತಿರುವುದಲ್ಲದೇ, ಸ್ವಾವಲಂಬಿ ಬದುಕಿಗೂ ದಿಕ್ಸೂಚಿಯಾಗಿದೆ ಎಂದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಅನುಭವಿಸಿದ ನೋವಿನ ದಿನಗಳು, ಆ ನಂತರ ಶಿಕ್ಷಣದ ಮೂಲಕವೇ ಸಮಾಜವನ್ನು ಗೆದ್ದ ಅಂಶಗಳನ್ನು ಇಂದಿನ ಯುವ ಸಮೂಹ ನೆನಪಿಸಿಕೊಳ್ಳಬೇಕಾಗಿದೆ ಮತ್ತು ಅದೇ ಮಾರ್ಗದಲ್ಲಿ ಯಶಸ್ಸನ್ನು ಸಾಧಿಸಬೇಕಾಗಿದೆ. ಸಂವಿಧಾನ ಪ್ರತಿಯೊಬ್ಬರ ಜೀವನದ ಯಶೋಗಾಥೆಗೆ ಅಗತ್ಯವಿರುವ ಎಲ್ಲಾ ಅನುಕೂಲಗಳನ್ನು ಮಾಡಿಕೊಟ್ಟಿದ್ದು, ಇದರ ಸದುಪಯೋಗವಾಗಬೇಕಾಗಿದೆ ಎಂದು   ಕರೆ ನೀಡಿದರು.

ಮೊಗೇರ ಸಮಾಜದ ಗೌರವಾಧ್ಯಕ್ಷ ಪಿ.ಎಂ.ರವಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ಒಬ್ಬ ವ್ಯಕ್ತಿಯಾಗಿರದೆ ಸಮಾಜ ಸುಧಾರಕರಾಗಿದ್ದರು ಎಂದು ಬಣ್ಣಿಸಿದರು. ಸ್ವತಂತ್ರ್ಯ ಭಾರತದ ಮೊದಲ ಕಾನೂನು ಸಚಿವರಾಗಿದ್ದ ಅಂಬೇಡ್ಕರ್ ಅವರು ಅಂದಿನ ಕಾಲದಲ್ಲಿಯೇ ಉದ್ಯೋಗ ವಿನಿಮಯ ಕಚೇರಿಯನ್ನು ಆರಂಭಿಸಿದರು, ಕಾರ್ಮಿಕರಿಗೆ ಕನಿಷ್ಠ ವೇತನ, ಪಿಂಚಣಿ ಸೌಲಭ್ಯ ಸೇರಿದಂತೆ ಯುವ ಸಮೂಹ ಮತ್ತು ಶೋಷಿತರ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದು ಗಮನ ಸೆಳೆದಿದ್ದರು. ಅವರ ದೂರದೃಷ್ಟಿತ್ವದ ಫಲವಾಗಿ ದೇಶದ ಎಲ್ಲಾ ವರ್ಗ ಮಂದಿ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭ್ಯುದಯವನ್ನು ಹೊಂದಲು ಸಾಧ್ಯವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆಯ ಬದುಕು ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು ಎಂದು ರವಿ ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಜಿ.ಚಂದ್ರ, ಪ್ರಮುಖರಾದ ಪಿ.ಜಿ.ರಮೇಶ್, ಸೀತಾರಾಂ ಸುಂಟಿಕೊಪ್ಪ, ರವಿ ಕಿರಗಂದೂರು, ಪಿ.ಬಿ.ಚಂದ್ರ, ರಾಮಚಂದ್ರ ಮತ್ತಿತರ ಪ್ರಮುಖರು ಹಾಜರಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: