ಮೈಸೂರು

ಹನಿಟ್ರ್ಯಾಪ್ : ನಾಲ್ವರ ಬಂಧನ

ಹನಿ ಟ್ರ್ಯಾಪ್ ನಡೆಸಿದ ಓರ್ವ ಮಹಿಳೆ ಸೇರಿದಂತೆ ನಾಲ್ವರು ಸುಲಿಗೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಬಂಧಿತರನ್ನು ಅರವಿಂದ ನಗರ ನಿವಾಸಿ ಗೀತಾ(35), ಕೆ.ಎನ್. ಪುರದ ನಿವಾಸಿ ಮಂಜುನಾಥ(22) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ಬಾಲಕರ ಬಾಲಮಂದಿರದ ವಶಕ್ಕೆ ನೀಡಲಾಗಿದೆ. ಬಂಧಿತರಿಂದ 15,650 ರೂ. ನಗದು ಮತ್ತು 95 ಸಾವಿರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊ‍ಳ್ಳಲಾಗಿದೆ.

ಆರ್ ಎಂ ಸಿ ವ್ಯಾಪಾರಿ ಸಣ್ಣಸ್ವಾಮಿ ಅವರಿಗೆ ಪರಿಚಯವಿದ್ದ ಅನು ಎಂಬ ಹುಡುಗಿಯು ತನ್ನೊಂದಿಗೆ ಮಾತನಾಡಲು ಬರುವಂತೆ ಡಿ.20 ರಂದು ಕುವೆಂಪುನಗರದ ಬಸ್ ಡಿಪೋ ಬಳಿ ಅವರನ್ನು ಬರಹೇಳಿದ್ದರು. ನಂತರ ಅಲ್ಲಿಂದ ಅರವಿಂದನಗರದ ನಿವಾಸಿ ಗೀತಾ ಎಂಬುವವರ ಮನೆಗೆ ಕರೆದುಕೊಂಡು ಹೋಗಿ ಆ ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಅಲ್ಲಿಗೆ ಬಂದ ಮೂವರು ವ್ಯಾಪಾರಿಗಳಿಗೆ ಪ್ರಾಣ ಬೆದರಿಕೆ ಹಾಕಿ ಅವರ ಬಳಿ ಇದ್ದ 90 ಸಾವಿರ ರೂ.ನಗದು, ಒಂದು ಚಿನ್ನದ ಸರ ಮತ್ತು ಉಂಗುರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಈ ಪ್ರಕರಣದ ಆರೋಪಿ ಗೀತಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ತನಗೆ ಪರಿಚಯವಿದ್ದ ಇತರೆ ಮೂವರ ಜತೆ ಸೇರಿಕೊಂಡು ಈ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

ಆರೋಪಿ ಮಂಜುನಾಥನ ವಿರುದ್ಧ ಈಗಾಗಲೇ ಮಂಡ್ಯ ಜಿಲ್ಲೆಯ ಅರಕೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಈ ಪತ್ತೆದಾರಿ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಸಿ.ಗೋಪಾಲ್, ಇನ್ಸ್ಪೆಕ್ಟರ್ ಕೆ.ಸಿ.ಪ್ರಕಾಶ್, ಪ್ರಸನ್ನಕುಮಾರ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

Leave a Reply

comments

Related Articles

error: