
ಮೈಸೂರು
ಹಲವು ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ ಏಕೈಕ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ : ಪ್ರೊ.ಎಂ.ಎಸ್.ಶೇಖರ್ ಬಣ್ಣನೆ
ಮೈಸೂರು,ಏ.15:- ಹಲವು ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ ಏಕೈಕ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಬಣ್ಣಿಸಿದರು.
ಅವರಿಂದು ಬಾಸುದೇವ ಸೋಮಾನಿ ಕಾಲೇಜಿನ ಸಭಾಂಗಣದಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಅಂಬೇಡ್ಕರ್ ಅವರು ರಾಜ್ಯ ಶಾಸ್ತ್ರಕ್ಕೆ ಎಷ್ಟು ಕೊಡುಗೆಯನ್ನು ನೀಡಿದ್ದಾರೋ ಅಷ್ಟೇ ಕೊಡುಗೆಯನ್ನು ಇತಿಹಾಸ, ಪತ್ರಿಕೋದ್ಯಮ, ಸಮಾಜಶಾಸ್ತ್ರ, ಸಂಸ್ಕೃತ, ಸಾಮಸ್ಕೃತಿಕ, ಧಾರ್ಮಿಕ, ಅರ್ಥಶಾಸ್ತ್ರ, ಈ ಎಲ್ಲ ಕ್ಷೇತ್ರಗಳಿಗೂ ನೀಡಿದ್ದಾರೆ. ಓರ್ವ ವ್ಯಕ್ತಿ ಇಷ್ಟು ಬಗೆಯ ಸಾಧನೆಯನ್ನು ಮಾಡಲು ಸಾಧ್ಯವೇ ಎಂಬ ಸಂದೇಹ ಬರುವ ಮಟ್ಟಿಗೆ ಸಾಧನೆ ಮಾಡಿದ್ದಾರೆ ಎಂದರು. ಪ್ರಧ್ಯಾಪರಾದ ತಕ್ಷಣ ಎಲ್ಲವನ್ನೂ ಬಲ್ಲೆ ಎನ್ನುವ ಕಾಲದಲ್ಲಿ ನಾವಿಲ್ಲ. ಪ್ರತಿಯೊಂದು ವಿಷಯದಲ್ಲಿಯೂ ಮಕ್ಕಳ ತೊಡಗಿಸಿಕೊಳ್ಳುವಿಕೆ ಮುಖ್ಯ. ಅದು ಭಾವನಾತ್ಮಕ ಸಂಬಂಧವನ್ನು ಕುದುರಿಸುತ್ತದೆ. ಅಂಬೇಡ್ಕರ್ ಅವರು ಬೆಳೆದು ಬಂದ ಪರಿಸರ ಆಧ್ಯಾತ್ಮಿಕವಾಗಿತ್ತು. ಬೌದ್ಧಿಕವಾಗಿಯೂ ಸಂಸ್ಕಾರವಿತ್ತು. ಸೈನಿಕರಾಗಿ ಅವರ ಮನೆತನ ದೇಶಪ್ರೇಮ ಮೆರೆದಿತ್ತು. ಅಂಬೇಡ್ಕರ್ ಅವರದ್ದು ಸುಂದರವಾದ ವ್ಯಕ್ತಿತ್ವವಾಗಿತ್ತು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಭಾರ್ಗವಿ ಡಿ.ಹೆಮ್ಮಿಗೆ, ದಿ ಇನ್ಸಟಿಟ್ಯೂಟ್ ಆಫ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಹೆಚ್.ಎನ್.ನಾಗರಾಜ್, ಮ್ಯಾನೇಜಿಂಗ್ ಟ್ರಸ್ಟಿ ಡಾ.ಎಂ.ಪುಟ್ಟಸ್ವಾಮಿ, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಮಹದೇವಯ್ಯ ಉಪಸ್ಥಿತರಿದ್ದರು. (ಜಿ.ಕೆ,ಎಸ್,ಎಚ್)