ಮೈಸೂರು

ಅಳಿಸಲಾಗದ ಗುರುತುಗಳಿಗೂ ಮೈಸೂರು ಪ್ರಸಿದ್ಧಿ!

ಮೈಸೂರಿನ ಹೆಸರು ಜಗದ್ವಿಖ್ಯಾತ. ಸದಾ ಒಂದಿಲ್ಲೊಂದು ರೀತಿಯಲ್ಲಿ ಹೆಸರು ಮಾಡುತ್ತಲೇ ಇರುತ್ತದೆ. ಹಲವಾರು ಪ್ರವಾಸಿತಾಣಗಳನ್ನು ಹೊಂದಿರುವ ಮೈಸೂರು ಪ್ರವಾಸಿಗರ ಆಕರ್ಷಕ ತಾಣವೂ ಹೌದು. ಜನತೆ ಬಳಸುವ ನೋಟುಗಳ ಮುದ್ರಣವೂ ಮೈಸೂರಿನಲ್ಲಿಯೇ ಆಗುತ್ತದೆ ಎಂಬ ಹೆಗ್ಗಳಿಕೆ ಒಂದೆಡೆಯಾದರೆ, ತಮ್ಮ ಹಕ್ಕು ಚಲಾಯಿಸಿದ್ದೇವೆ ಎಂದು ತೋರಿಸಲು ಗುರುತಿಗಾಗಿ ಬಳಸುವ ಶಾಯಿಯೂ ಇಲ್ಲಿಯೇ ಸಿದ್ಧಗೊಳ್ಳುತ್ತದೆ.

ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶಕ್ಕೆ 5.30 ಲಕ್ಷ ಅಳಿಸಲಾಗದ ಶಾಯಿಯ ಬಾಟಲಿಗಳನ್ನು ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆಯಿಂದ ಪೂರೈಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಮತದಾರರ ಕೈ ಬೆರಳಿಗೆ ಹಾಕುವ ಅಳಿಸಲಾಗದ ಶಾಯಿಯನ್ನು ಮೈಸೂರಿನ ಮೈಲ್ಯಾಕ್‍ನಿಂದ ಪೂರೈಕೆ ಮಾಡಲಾಗುತ್ತಿದೆ. ಚುನಾವಣಾ ಆಯೋಗದಿಂದ ಇನ್ನೂ 2 ಲಕ್ಷ ಬಾಟಲ್‍ಗಳಿಗೆ ಬೇಡಿಕೆ ಬಂದಿದ್ದು ಅದನ್ನು ಕೂಡ ಪೂರೈಕೆ ಮಾಡಲಾಗುತ್ತಿದೆ. ಈ ಕುರಿತು ಮೈಲ್ಯಾಕ್ ಸಂಸ್ಥೆಯ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ಮಾತನಾಡಿ ಮೈಲಾಕ್ ಸಂಸ್ಥೆ 6.5 ಕೋಟಿ ರೂ. ವ್ಯವಹಾರ ನಡೆಸಿದ್ದು, ಯಾವುದೇ ಕ್ಷಣದಲ್ಲಿ ಬೇಡಿಕೆ ಬಂದರೂ ಶಾಯಿ ಪೂರೈಕೆ ಮಾಡಲು ನಾವು ಸಿದ್ದರಿದ್ದೇವೆ ಎಂದಿದ್ದಾರೆ. ಮೈಲ್ಯಾಕ್ ಅಳಿಸಲಾಗದ ಶಾಯಿ ತಯಾರಿಸುವ ದೇಶದ ಏಕೈಕ ಸಂಸ್ಥೆಯಾಗಿದ್ದು, ದೇಶ ಅಲ್ಲದೆ ವಿಶ್ವದ ಇತರ ರಾಷ್ಟ್ರಗಳಿಗೂ ಅಳಿಸಲಾಗದ ಶಾಯಿ ಪೂರೈಸುತ್ತಾ ಬಂದಿದೆ. ಇದರ ಜೊತೆಯಲ್ಲಿ ಗೋವಾ, ಪಂಜಾಬ್, ಮಣಿಪುರ ,ಉತ್ತರ ಖಂಡ ರಾಜ್ಯಗಳಿಗೂ ಶಾಯಿ ಬಾಟಲ್ ರವಾನೆ ಮಾಡಲಾಗಿದೆಯಂತೆ.

ಒಟ್ಟಿನಲ್ಲಿ ಮೈಸೂರು ಕೇವಲ ಸ್ವಚ್ಛ ನಗರಿ, ಪ್ರವಾಸಿತಾಣ ಇಷ್ಟಕ್ಕೆ ಸೀಮಿತವಾಗದೆ, ಅಳಿಸಲಾಗದ ಗುರುತುಗಳಿಗೂ ಪ್ರಸಿದ್ಧವಾಗಿದೆ.

Leave a Reply

comments

Related Articles

error: