
ಪ್ರಮುಖ ಸುದ್ದಿ
ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅಗತ್ಯ : ಸೈಕ್ಲಿಂಗ್ ಕೋಚ್ ಚರಿನ್ ಚರ್ಮಣ ಅಭಿಮತ
ರಾಜ್ಯ(ಮಡಿಕೇರಿ) ಏ.16 :- ನಾಪೋಕ್ಲು ಕೊಡವ ಸಮಾಜದ ಕ್ರೀಡೆ, ಸಾಂಸ್ಕೃತಿಕ ಮತ್ತು ಮನರಂಜನಾ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಕೊಡವ ಓಪನ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸಮಾರೋಪ ಸಮಾರಂಭ ನಾಪೋಕ್ಲು ಕೊಡವ ಸಮಾಜದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಂತರರಾಷ್ಟ್ರೀಯ ಖ್ಯಾತಿಯ ಸೈಕ್ಲಿಂಗ್ ಕೋಚ್ ಚರಿನ್ ಚರ್ಮಣ, ನಾಪೋಕ್ಲುವಿನಲ್ಲಿ ಶಟಲ್ ಬ್ಯಾಡ್ ಮಿಂಟನ್ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಗ್ರಾಮೀಣ ಮಕ್ಕಳಲ್ಲಿ ಇರುವ ಪ್ರತಿಭೆಗಳ ಅನಾವರಣಕ್ಕೆ ಇಂತಹ ಪಂದ್ಯಾವಳಿ ಸಹಕಾರಿಯಾಗಿದೆ. ಪಂದ್ಯಾವಳಿಯಲ್ಲಿ ಪಾಲ್ಗೊಂಡ ಪಟುಗಳು ಮುಂದೆ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಆಶಿಸಿದರು.
ಸಮಿತಿ ಅಧ್ಯಕ್ಷರಾದ ಕಾಂಡಂಡ ಜೋಯಪ್ಪ ಮಾತನಾಡಿ, 40 ವರ್ಷದಿಂದ ಈಚೆಗೆ ಶಟಲ್ ಬ್ಯಾಡ್ಮಿಂಟನ್ ಸಾಕಷ್ಟು ಪ್ರಚಲಿತದಲ್ಲಿದ್ದು, ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳಿಗೆ ಸಾಕಷ್ಟು ಸೌಲಭ್ಯಗಳು ಕೂಡ ದೊರೆಯುತ್ತಿದೆ. ಅವುಗಳನ್ನು ನಮ್ಮ ಗ್ರಾಮದ ಕ್ರೀಡಾಪಟುಗಳು ಸದುಪಯೋಗಪಡಿಸಿಕೊಳ್ಳಬೇಕು. ನಾಪೋಕ್ಲುವಿನಲ್ಲಿ ಈಗಾಗಲೇ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ರಚಿಸಲಾಗಿದ್ದು, ಗ್ರಾಮದ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಪ್ರಮುಖರಾದ ಅಪ್ಪಚಟ್ಟೋಳಂಡ ಮನುಮುತ್ತಪ್ಪ ಮಾತನಾಡಿ, ಶಟಲ್ ಬ್ಯಾಡ್ಮಿಂಟನ್ನಲ್ಲಿ ಅಶ್ವಿನಿ ಪೊನ್ನಪ್ಪ ಸೇರಿದಂತೆ ಸಾಕಷ್ಟು ಕೊಡಗಿನ ಮಂದಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ್ದಾರೆ. ಮುಂದೆಯೂ ಬ್ಯಾಡ್ಮಿಂಟನ್ನಲ್ಲಿ ರಾಷ್ಟ್ರಮಟ್ಟದಲ್ಲಿ ಕೊಡಗಿನ ಪಟುಗಳು ಹೆಸರು ಮಾಡುವಂತಾಗಬೇಕೆಂದು ಕಿವಿಮಾತು ಹೇಳಿದರು.
ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸೈಕ್ಲಿಂಗ್ನಲ್ಲಿ ಸಾಧನೆಗೈದು ಸೇನೆಯಲ್ಲಿ ಗೌರವ ಹುದ್ದೆ ಪಡೆದ ಚರಿನ್ ಚರ್ಮಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಮುಖರಾದ ಕುಲ್ಲೇಟೀರ ಶಂಬು ಮಾದಪ್ಪ, ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಮುಕ್ಕಾಟೀರ ಜಯ, ಕುಲ್ಲೇಟೀರ ಅಜಿತ್ ನಾಣಯ್ಯ, ಸುನಿಲ್ ಹಾಗೂ ಕೊಡವ ಸಮಾಜದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)