ಪ್ರಮುಖ ಸುದ್ದಿ

ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಬಾಂಡ್ ಗಣಪತಿ, ಉಪಾಧ್ಯಕ್ಷರಾಗಿ ಹರೀಶ್ ಪೂವಯ್ಯ ಅವಿರೋಧ ಆಯ್ಕೆ

ರಾಜ್ಯ(ಮಡಿಕೇರಿ) ಏ.16 :- ಪ್ರತಿಷ್ಟಿತ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಬಾಂಡ್ ಗಣಪತಿ ಮತ್ತು ಉಪಾಧ್ಯಕ್ಷರಾಗಿ ಕೇಟೋಳಿರ ಹರೀಶ್ ಪೂವಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವೀರಾಜಪೇಟೆ ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ಪ್ರತಿನಿಧಿಯಾಗಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಬಾಂಡ್ ಗಣಪತಿ ಅವರು ಅಧ್ಯಕ್ಷರಾಗಿ ಮತ್ತು ಮಡಿಕೇರಿ ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದ ಕೇಟೋಳಿರ ಹರೀಶ್ ಪೂವಯ್ಯ ಅವರು ನೂತನ ಅಧ್ಯಕ್ಷ ಉಪಾಧ್ಯಕ್ಷರುಗಳಾಗಿ ಅಧಿಕಾರ ವಹಿಸಿಕೊಂಡರು.
ಬ್ಯಾಂಕ್ ಚುನಾವಣಾ ಪ್ರಕ್ರಿಯೆಯ ನಾಮಪತ್ರ ಸಲ್ಲಿಕೆಯ ಸಂದರ್ಭ ಅಧ್ಯಕ್ಷ ಸ್ಥಾನಕ್ಕೆ ಬಾಂಡ್ ಗಣಪತಿ ಅವರೊಂದಿಗೆ ಹಿಂದಿನ ಅವಧಿಯ ಅಧ್ಯಕ್ಷರಾದ ಬಿ.ಡಿ.ಮಂಜುನಾಥ್, ಉಪಾಧ್ಯಕ್ಷ ಸ್ಥಾನಕ್ಕೆ ಕೇಟೋಳಿರ ಹರೀಶ್ ಪೂವಯ್ಯ ಅವರೊಂದಿಗೆ ಕನ್ನಂಡ ಸಂಪತ್ ಅವರು ನಾಮಪತ್ರ ಸಲ್ಲಿಸುವುದರೊಂದಿಗೆ ಅಚ್ಚರಿ ಮೂಡಿಸಿದರು.
ಒಂದೇ ಪಕ್ಷದವರ ನಡುವೆ ಚುನಾವಣೆಯ ಸಾಧ್ಯತೆಗಳು ಏರ್ಪಟ್ಟ ಹಿನ್ನೆಲೆಯಲ್ಲಿ ಬಿಜೆಪಿ ಪ್ರಮುಖರು ಹಾಗೂ ಬ್ಯಾಂಕ್ ನಿರ್ದೇಶಕರೂ ಆದ ಅಪ್ಪಚಟ್ಟೋಳಂಡ ಮನುಮುತ್ತಪ್ಪ ಮತ್ತಿತರರು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸುವ ಮೂಲಕ ಗೊಂದಲ ನಿವಾರಿಸಿದರು. ಬಳಿಕ ಬಿ.ಡಿ.ಮಂಜುನಾಥ್ ಮತ್ತು ಕನ್ನಂಡ ಸಂಪತ್ ಅವರು ನಾಮಪತ್ರ ಹಿಂದಕ್ಕೆ ಪಡೆಯುವ ಮೂಲಕ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು.
ಅಧ್ಯಕ್ಷರಾಗಿ ಆಯ್ಕೆಯಾದ ಬಾಂಡ್ ಗಣಪತಿ ಅವರು ಮಾತನಾಡಿ, ಅಧ್ಯಕ್ಷ ಸ್ಥಾನ ತಮಗೆ ಬಯಸದೇ ಬಂದ ಭಾಗ್ಯವೆಂದು ತಿಳಿಸಿದರು. ತಮ್ಮ ಅಧಿಕಾರದ ಅವಧಿಯಲ್ಲಿ ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭ ಹಾಜರಿದ್ದ ಬ್ಯಾಂಕಿನ ಎಲ್ಲಾ ನೂತನ ನಿರ್ದೇಶಕರು ಅಧ್ಯಕ್ಷ-ಉಪಾಧ್ಯಕ್ಷರಿಗೆ ಪುಷ್ಪಾಹಾರ ಹಾಕಿ ಅಭಿನಂದಿಸಿದರು.
ಚುನಾವಣಾಧಿಕಾರಿಗಳಾದ ಜಿ.ಪಂ ಉಪ ಕಾರ್ಯದರ್ಶಿ ಭೀಮಸೇನ ಗುಡೂರು ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ –ಉಪಾಧ್ಯಕ್ಷರ ಆಯ್ಕೆ ನಡೆಯಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: