ಮೈಸೂರು

ಬ್ರಾಹ್ಮಣ ಸಮುದಾಯದ ಶೇಕಡ 80ರಷ್ಟು ಮತಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳ ಪಾಲಾಗಲಿವೆ : ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಶ್ವಾಸ

ಮೈಸೂರು,ಏ.16:- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯದ ಶೇಕಡ 80ರಷ್ಟು ಮತಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳ ಪಾಲಾಗಲಿವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.

ಅವರು ನಿನ್ನೆ ಮೈಸೂರಿನ ಬ್ರಾಹ್ಮಣ ಸಮಾಜದ ಮುಖಂಡ ಡಾ. ಜಿ. ರವಿಯವರ  ಬೋಗಾದಿಯಲ್ಲಿರುವ ನಿವಾಸಕ್ಕೆ  ಭೇಟಿ ನೀಡಿ ಮಾತುಕತೆ ನಡೆಸಿದರು. ರಾಜ್ಯ ಸಮ್ಮಿಶ್ರ ಸರ್ಕಾರ ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪನೆಗೆ ಚಾಲನೆ ನೀಡಿದೆ. ಹಾಗಾಗಿ ಬ್ರಾಹ್ಮಣ ಸಮುದಾಯ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕೂಟದ ಅಭ್ಯರ್ಥಿಗಳ ಪರ ಮತ ಚಲಾಯಿಸಲಿದೆ. ಇದನ್ನು ಮನಗಂಡಿರುವ  ಬಿಜೆಪಿ ನಾಯಕರು ವಿಚಲಿತರಾಗಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ದಬ್ಬಾಳಿಕೆ ನಡೆಸಿ ಬ್ರಾಹ್ಮಣ ಸಮುದಾಯದ ಮತ ಪಡೆಯಲು ಮುಂದಾಗಿದೆ. ಆದರೆ ಇದು ಫಲಪ್ರದವಾಗುವುದಿಲ್ಲ. ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿರುವ 14 ಕ್ಷೇತ್ರಗಳಲ್ಲಿ ಮೈತ್ರಿಕೂಟ 11 ರಿಂದ 12 ಕ್ಷೇತ್ರಗಳಲ್ಲಿ ಖಂಡಿತವಾಗಿಯೂ ಜಯಗಳಿಸಲಿದೆ ಎಂದರು.  ಮೈಸೂರು-ಕೊಡಗು, ಚಾಮರಾಜನಗರ  ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ವಿಜಯಶಂಕರ್, ಧ್ರುವನಾರಾಯಣ್ ಜಯಗಳಿಸಲಿದ್ದಾರೆಂದು  ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ ,ಬ್ರಾಹ್ಮಣ ಸಮಾಜದ ಮುಖಂಡರಾದ ನಟರಾಜ ಜೋಯಿಸ್, ರಘುರಾಂ ಸೇರಿದಂತೆ ಇತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: