ಮೈಸೂರು

ಕೆಟ್ಟು ನಿಲ್ಲುತ್ತಿದೆ ಮಹಿಳಾ ಸಹಾಯವಾಣಿ ವಾಹನ

ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳನ್ನು ಹತ್ತಿಕ್ಕಲು ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಈ ಸಂಬಂಧ ದೂರು ನೀಡಲು ಪ್ರತ್ಯೇಕ ಮಹಿಳಾ ಸಹಾಯವಾಣಿಯನ್ನು ಆರಂಭಿಸಿತ್ತು. ಈ ಸಂಬಂಧ ವಾಹನಗಳನ್ನು ನೀಡಲಾಗಿದ್ದು, ಮೈಸೂರಿನಲ್ಲಿಯೂ ಜಾರಿಯಲ್ಲಿದೆ. ಈ ವಾಹನ ನಗರದಾದ್ಯಂತ ಗಸ್ತು ತಿರುಗಲಿವೆ. ಮಹಿಳಾ ಸಹಾಯವಾಣಿಗೆ ಅಪರಾಧ ವಿಷಯ ತಿಳಿದ ತಕ್ಷಣ ಗಸ್ತು ತಿರುಗುತ್ತಿರುವ ತಂಡಕ್ಕೆ ಮಾಹಿತಿ ರವಾನೆಯಾಗಲಿದೆ. ಆದರೆ ಗಸ್ತು ತಿರುಗುವ ವಾಹನವೇ ಕೆಟ್ಟು ನಿಂತರೆ..?

ಹೀಗೊಂದು ಅವ್ಯವಸ್ಥೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ಕೆ.ಆರ್.ಉಪವಿಭಾಗದ ಚಾಮುಂಡಿ ವನ್, ಮಹಿಳಾ ಸಹಾಯವಾಣಿ ಕೆಟ್ಟು ನಿಂತಿತ್ತು.  ಮಹಿಳೆಯರ ಸಹಾಯಕ್ಕಾಗಿ ಇರುವ ವಾಹನವೇ ಕೆಟ್ಟುನಿಂತ ಪರಿಣಾಮ ಯುವತಿಯರೇ ಅದನ್ನು ನೂಕಿದ ಹಾಸ್ಯಾಸ್ಪದ ಘಟನೆ ಮೈಸೂರಿನಲ್ಲಿ ನಡೆದಿದೆ. ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ವಾಹನವನ್ನು ಸ್ವಲ್ಪ ದೂರದವರೆಗೆ  ಹಿಂಬದಿಯಿಂದ ನೂಕಿದ್ದು, ಕಾಲೇಜು ವಿದ್ಯಾರ್ಥಿನಿಯರಿಂದಲೇ ವಾಹನ ಕುರಿತಂತೆ ಆಕ್ರೋಶ ವ್ಯಕ್ತವಾಗಿದೆ. ಸಮಾಜದ ಎಲ್ಲರ ರಕ್ಷಣೆ ಪೊಲೀಸರ ಹೊಣೆ ನಿಜ. ಅದರಲ್ಲೂ ಮಹಿಳೆಯರ ರಕ್ಷಣೆಗೆ ಎಷ್ಟು ಗಮನ ಹರಿಸಿದರೂ ಸಾಲದು. ಏನಾದರೂ ಆಪತ್ತು ಸಂಭವಿಸಿತು ಅಂದಾಗ ಇಂತಹ ವಾಹನಗಳನ್ನು ಇಟ್ಟುಕೊಂಡು ಘಟನಾ ಸ್ಥಳವನ್ನು ಹೇಗೆ  ತಲುಪಲು ಸಾಧ್ಯ. ಮಹಿಳಾ ಸಹಾಯವಾಣಿ ವಾಹನವನ್ನು ಬೇರೆ ನೀಡಿ ಎಂಬುದು ವಿದ್ಯಾರ್ಥಿನಿಯರ ಒತ್ತಾಯ.

ಗಸ್ತು ತಿರುಗುವ ವಾಹನ ಚೆನ್ನಾಗಿದ್ದರೆ ಒಳ್ಳೆಯದು. ಹಳೆಯ ವಾಹನ ಕೈಬಿಟ್ಟು ಬರಲಿರುವ ಹೊಸ ವಾಹನವನ್ನು ಅಳವಡಿಸಿಕೊಳ್ಳಲಿ ಎನ್ನುವುದು ಅಲ್ಲಿ ವಾಹನ ನೂಕಿದವರ ಅಭಿಪ್ರಾಯವಾಗಿತ್ತು. ಹೆಚ್ಚಿನ ಅನಾಹುತವಾಗುವುದಕ್ಕೆ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಂಡರೆ ಒಳ್ಳೆಯದು.

Leave a Reply

comments

Related Articles

error: