ಕರ್ನಾಟಕ

ಹಾಸನ ಚುನಾವಣೆ: ಅಂತಿಮ ಎರಡು ದಿನ ವಿಶೇಷ ಕಣ್ಗಾವಲಿಗೆ ತಂಡಗಳ ನಿಯೋಜನೆ

ಹಾಸನ (ಏ.16): ಲೋಕಸಭಾ ಚುನಾವಣೆಯ ಕಡೆಯ ಎರಡು ದಿನಗಳಲ್ಲಿ ಚನಾವಣಾ ಅಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹೊಸ ತಂಡಗಳನ್ನು ರಚಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಈ ವಿಶೇಷ ತಂಡಗಳಿಗೆ ಏ.16ರ ಸಂಜೆ 6 ರಿಂದ ಏ.18ರ ಸಂಜೆ 6 ಗಂಟೆವರೆಗೆ ಕೈಗೊಳ್ಳಬೇಕಾದ ಕ್ರಮಗಳು ಮಾದರಿ ನೀತಿ ಸಂಹಿತೆ ಜಾರಿ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಯವರು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿರುತ್ತದೆ. ಮತದಾನ ದಿನದ ಪೂರ್ವದ 72 ಗಂಟೆಗಳ ಅವಧಿಯಲ್ಲಿನ ಸಂಭಾವ್ಯ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಈಗಾಗಲೇ ಅಸ್ತಿತ್ವದಲ್ಲಿರುವ ಪ್ಲೈಯಿಂಗ್ ಸ್ಕ್ವಾಡ್ ತಂಡದೊಂದಿಗೆ ವಿಧಾನಸಭಾ ಕ್ಷೇತ್ರವಾರು ವಿಶೇಷ ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಿ ಆದೇಶಿಸಿದ್ದಾರೆ.

ಈ ತಂಡಗಳ ಅಧಿಕಾರಿ/ಸಿಬ್ಬಂದಿಗಳು ಈಗಾಗಲೇ ಅಸ್ತಿತ್ವದಲ್ಲಿರುವ ತಂಡದೊಂದಿಗೆ ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸಲು ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತು ಇಂದು ನಡೆದ ಸಭೆಯಲ್ಲಿ ಈಗಾಗಲೇ ನಿರ್ದೇಶನಗಳನ್ನು ನೀಡಲಾಗಿದೆ. ಮುಂದುವರೆದು, ಈ ತಂಡಗಳಿಗೆ ಹೋಬಳಿವಾರು ಕಾರ್ಯವ್ಯಾಪ್ತಿಯನ್ನು ಹಂಚಿಕೆ ಮಾಡಿ ನೇಮಕ ಮಾಡಲಾಗಿದ್ದು, ನೇಮಿಸಲಾಗಿರುವ ಹೋಬಳಿ ವ್ಯಾಪ್ತಿಯನ್ನು ಮೀರಿ/ಹೊರತುಪಡಿಸಿ ಆದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ದೂರು/ಮಾಹಿತಿಗಳೂ ಸ್ವೀಕೃತವಾದಲ್ಲಿ, ಅವುಗಳಿಗೂ ಸಹ ನಿಯಮಾನುಸಾರ ತುರ್ತಾಗಿ ಕ್ರಮ ವಹಿಸಲು ಜಿಲ್ಲಾಧಿಕಾರಿ ಅವರು ಸೂಚಿಸಿದ್ದಾರೆ.

ಏ.16 ರಿಂದು ಏ. 18 ರವರೆಗೆ ಪ್ರತಿದಿನ ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆವರೆಗೆ 1 ತಂಡ ಹಾಗೂ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಇನ್ನೊಂದು ತಂಡ ನಿರಂತರವಾಗಿ ತಮಗೆ ವಹಿಸಿರುವ ಹೋಬಳಿಗಳಲ್ಲಿ ಸಂಚರಿಸಿ ಚುನಾವಣಾ ಅಕ್ರಮಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.

ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿ ತಂಡಗಳು ಕೆಲಸ ಮಾಡುತ್ತಿದ್ದು ಈಗ ಹೆಚ್ಚುವರಿ ತಂಡಗಳನ್ನು ರಚಿಸಲಾಗಿದೆ ಪ್ರತಿ ತಂಡಕ್ಕೂ ವಿಡಿಯೋ ಚಿತ್ರೀಕರಣ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಈ ತಂಡಗಳು ಎಲ್ಲಾ ಖಾಸಗಿ, ಸರ್ಕಾರಿ ವಾಹನಗಳನ್ನು ತಪಾಸಣೆ ಮಾಡಬೇಕು, ಅಂಗಡಿ, ಪೆಟ್ರೋಲ್ ಬಂಕ್‍ಗಳಲ್ಲಿ ಟೋಕನ್ ನೀಡಿ ಪಡೆಯುತ್ತಿರುವ ಸೌಲಭ್ಯಗಳನ್ನು ಗಮನಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಏ. 16ರ ಸಂಜೆ ನಂತರ ರೋಡ್ ಶೋ, ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಕೇವಲ 10 ಜನರೊಳಗಿನ ತಂಡ ಮನೆ ಮನೆಗೆ ತೆರಳಿ ಪ್ರಚಾರ ನಡೆಸಬಹುದಾಗಿದೆ. ಇದೇ ರೀತಿ, ಧ್ವನಿವರ್ಧಕಗಳನ್ನು ಬಳಸಿ ಪ್ರಚಾರ ಮಾಡುವಂತಿಲ್ಲ. ಪೋಸ್ಟರ್, ಬ್ಯಾನರ್, ಹೋರ್ಡಿಂಗ್ಸ್, ಕರಪತ್ರಗಳ ಮೂಲಕ ಪ್ರಚಾರ ನಡೆಸುವಂತಿಲ್ಲ. ಈ ಬಗ್ಗೆ ಈ ವಿಶೇಷ ಕಣ್ಗಾವಲು ತಂಡ ನಿಗಾವಹಿಸಬೇಕು ಎಂದು ಪ್ರಿಯಾಂಕ ವೇರಿ ಫ್ರಾನ್ಸಿಸ್ ಅವರು ಸೂಚನೆ ನೀಡಿದ್ದಾರೆ.

16 ರ ಸಂಜೆ ನಂತರ ಚುನಾವಣಾ ಪ್ರಚಾರಕ್ಕೆ ಅನುಮತಿ ಪಡೆದಿದ್ದ ವಾಹನಗಳನ್ನು ಬಳಸುವಂತಿಲ್ಲ. ಈ ಬಗ್ಗೆ ವಿಶೇಷ ಗಮನಹರಿಸಬೇಕು. ಹಣ ಹಂಚಿಕೆಯಾಗಬಹುದಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದ್ದಲ್ಲಿ ಮಾದರಿ ನೀತಿ ಸಂಹಿತೆ ಜಾರಿ ತಂಡಗಳ ಗಮನಕ್ಕೆ ತಂದು ಪ್ರಕರಣ ದಾಖಲಿಸಬೇಕು ಎಂದು ಅವರು ಹೇಳಿದರು.

ಮದ್ಯದಂಗಡಿಗಳಲ್ಲಿ ಆಗುವ ಚಿಲ್ಲರೆ ಮಾರಾಟದ ಬಗ್ಗೆ ನಿಗಾವಹಿಸಬೇಕು. ತಮಗೆ ವಹಿಸಿದ ವ್ಯಾಪ್ತಿಯ ಪ್ರದೇಶದ ಹೋಟೆಲ್, ಲಾಡ್ಜ್, ಸಮುದಾಯ ಭವನಗಳನ್ನು ತಪಾಸಣೆ ಮಾಡಿ ಈ ಕ್ಷೇತ್ರದಲ್ಲಿ ಮತದಾರರಲ್ಲದೇ ಇರುವವರು ತಂಗಿರುವ ಬಗೆ ಪರಿಶೀಲಿಸಬೇಕು. ವಿಶೇಷ ಔತಣ ಕೂಟಗಳೇನಾದರೂ ಆಯೋಜನೆಗೊಂಡಿದ್ದು ಅಲ್ಲಿಗೆ ತೆರಳಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮೊದಲು ನೀತಿ ಸಂಹಿತೆ ಉಲ್ಲಂಘನೆ ನಡೆಯುತ್ತಿವೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯವರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನಿರ್ದೇಶನ ನೀಡಿದ್ದಾರೆ.

ಅಪರ ದಂಡಾಧಿಕಾರಿ ಎಂ.ಎಲ್ ವೈಶಾಲಿ, ಪ್ರೋಬೆಷನರಿ ಐ.ಎ.ಎಸ್. ಅಧಿಕಾರಿ ಪ್ರಿಯಾಂಗ, ಮಾದರಿ ನೀತಿ ಸಂಹಿತೆ ಜಾರಿ ತಂಡದ ಮುಖ್ಯಸ್ಥರು ಮತ್ತಿತರರು ಹಾಜರಿದ್ದರು.

ಮತದಾನ ವಹಿಸಬೇಕಾದ ಮುಂಜಾಗ್ರತೆಗಳು:
ಮತಗಟ್ಟೆಯ 100 ಮೀಟರ್ ಒಳಗೆ ಮತಯಾಚನೆ ಮಾಡುವಂತಿಲ್ಲ, ಮತಗಟ್ಟೆಯ 200 ಮೀಟರ್ ದೂರದಲ್ಲಿ ಸ್ಥಾಪಿಸಲಾಗುವ ಅಭ್ಯರ್ಥಿಗಳ ಪರವಾದ ಬ್ಲಾಕ್‍ನಲ್ಲಿ ಕೇವಲ 3*11\2 ಅಡಿ ಅಳತೆಯ ಬ್ಯಾನರ್ ಅಳವಡಿಸಬಹುದು ಆದೂ ವಿತರಿಸುವ ಮತದಾರರ ಸ್ಲಿಪ್‍ಗಳಲ್ಲಿ ಅಭ್ಯರ್ಥಿಯ ಭಾವಚಿತ್ರ ಮತ್ತು ಪಕ್ಷದ ಚಿಹ್ನೆ ಬಳಸುವಂತಿಲ್ಲ. ಅಭ್ಯರ್ಥಿಗಳ ಬೂತ್‍ಗಳಲ್ಲಿ ಕೇವಲ ಮೇಲಿನ ನೆರಳು ವ್ಯವಸ್ಥೆ ಮಾಡಬಹುದಾಗಿದ್ದು, ಸುತ್ತಲೂ ಪರದೆ ಹಾಕುವಂತಿಲ್ಲ.

ಅಭ್ಯರ್ಥಿಗಳ ಹಾಗೂ ಏಜೆಂಟ್‍ಗಳು ಅವರಿಗೆ ಅನುಮತಿ ನೀಡಿರುವ ವಾಹನಗಳಲ್ಲಿ ಮಾತ್ರ ಸಂಚರಿಸಬಹುದು ಹಾಗೂ ಈ ವಾಹನಗಳಲ್ಲಿ ಬೇರೆಯವರು ಸಂಚರಿಸುವಂತಿಲ್ಲ ಈ ವಿಷಯಗಳ ಬಗ್ಗೆ ಈ ವಿಶೇಷ ತಂಡಗಳು ಗಮನಿಸಿ ನಿಯಮ ಉಲ್ಲಂಘನೆಯಾದರೆ ಕ್ರಮ ಜರುಗಿಸಬೇಕು ಎಂದರು. (ಎನ್.ಬಿ)

Leave a Reply

comments

Related Articles

error: