ಕರ್ನಾಟಕಪ್ರಮುಖ ಸುದ್ದಿ

ಮೇ 19ರ ತನಕ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸುವಂತಿಲ್ಲ: ಆಯೋಗ ಕಟ್ಟಪ್ಪಣೆ

ಬೆಂಗಳೂರು (ಏ.16): ಕೊನೆಯ ಹಂತದ ಮತದಾನ ನಡೆಯುವ ಮೇ 19ರ ತನಕ ಯಾವುದೇ ರೀತಿಯ ಮತದಾನೋತ್ತರ ಸಮೀಕ್ಷೆ ಫಲಿತಾಂಶಗಳನ್ನು ಮುದ್ರಣ ಹಾಗೂ ಇತರೆ ಯಾವುದೇ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟಿಸಬಾರದು ಎಂದು ಚುನಾವಣಾ ಆಯೋಗ ಹೇಳಿದೆ.

ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು 23ರಂದು ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಏಪ್ರಿಲ್ 11ರ ಬೆಳಗ್ಗೆ 7 ಗಂಟೆಯಿಂದ ಕೊನೆಯ ಹಂತದ ಮತದಾನ ದಿನಾಂಕವಾದ ಮೇ 19ರ ಸಂಜೆ 6.30ರ ತನಕ ಯಾವುದೇ ರೀತಿಯ ಮತದಾನದ ನಂತರದ ಸಮೀಕ್ಷೆ ಪ್ರಕಟಿಸುವಂತಿಲ್ಲ.

1951 ಪ್ರಕರಣ 126ಎ ನಂತೆ ಯಾವುದೇ ಟಿವಿ, ರೇಡಿಯೋ, ಕೇಬಲ್, ಎಫ್‌ಎಂ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಚುರಪಡಿಸುವಂತಿಲ್ಲ. ಈ ಅವಧಿಯಲ್ಲಿ ಅಭ್ಯರ್ಥಿಯ ಪರ ಅಥವಾ ವಿರೋಧ ಯಾವುದೇ ವಿಶ್ಲೇಷಣೆ ಮಾಡುವಂತಿಲ್ಲ ಹಾಗೂ ಅಭ್ಯರ್ಥಿಗಳ ಸಂದರ್ಶನಗಳನ್ನು ನಡೆಸುವಂತಿಲ್ಲ.

ಯಾವುದೇ ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶವನ್ನು ಯಾವುದೇ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚುರ ಪಡಿಸುವುದನ್ನು ನಿರ್ಬಂಧಿಸಿದೆ. ಈ ಅವಧಿಯಲ್ಲಿ ಜಿಲ್ಲಾ ಮಾಧ್ಯಮ ಮತ್ತು ಮೇಲುಸ್ತುವಾರಿ ಸಮಿತಿಯಿಂದ ಅನುಮತಿ ಪಡೆಯದೇ ಇರುವ ಯಾವುದೇ ಜಾಹಿರಾತುಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುವಂತಿಲ್ಲ.

ಅನುಮತಿ ಪಡೆಯದೇ ಜಾಹೀರಾತುಗಳನ್ನು ಪ್ರಕಟಿಸಿದರೆ ಅಭ್ಯರ್ಥಿಗಳು ಹಾಗೂ ಪ್ರಕಟಿಸಿದ ಮಾಧ್ಯಮದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲಾ ಮಾಧ್ಯಮ ಮಿತ್ರರು ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: