ಪ್ರಮುಖ ಸುದ್ದಿ

ತಮಿಳುನಾಡಿನಲ್ಲಿ ಮತದಾರರಿಗೆ ಹಂಚಲು ಶೇಖರಿಸಿಟ್ಟಿದ್ದ ಭಾರೀ ಹಣ ಆದಾಯ ತೆರಿಗೆ ಅಧಿಕಾರಿಗಳ ವಶಕ್ಕೆ

ದೇಶ(ಚೆನ್ನೈ)ಏ.17:- ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ 1.48ಕೋ.ರೂ.ನಗದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಬೆಳಿಗ್ಗೆ ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ತೆಣಿ ಜಿಲ್ಲೆಯಲ್ಲಿ ನಾಳೆ ಮತದಾನ ನಡೆಯಲಿದ್ದು, ಕೋಟಿಗಟ್ಟಲೆ ಹಣವನ್ನು 94ಪೊಟ್ಟಣಗಳಲ್ಲಿ ಕವರ್ ನೊಳಗೆ ಇಡಲಾಗಿತ್ತು. ಕವರ್ ಮೇಲೆ ವಾರ್ಡ್ ಸಂಖ್ಯೆ, ಮತದಾರರ ಸಂಖ್ಯೆಯೊಂದಿಗೆ ಪ್ರತಿಯೊಬ್ಬರಿಗೂ 300ರೂ.ಎಂದು ಬರೆಯಲಾಗಿತ್ತು ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.  ಹಣ ಸಿಕ್ಕಿದ ಕಟ್ಟಡವು ಟಿಟಿವಿ ದಿನಕರನ್ ಅವರ ಎಎಂಎಂಕೆ ಪಕ್ಷದ ಕಾರ್ಯಕಾರಿ ಕಛೇರಿ ಆವರಣದಲ್ಲಿದೆ. ಇಂದು ನಡೆಸಿದ ದಾಳಿಯ ವಿವರಗಳನ್ನು ಕೇಂದ್ರ ನೇರ ತೆರಿಗೆ ಮಂಡಳಿಗೆ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಕಳುಹಿಸಲಿದೆ. ಅಕ್ರಮವಾಗಿ ನಗದನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯ ನಡೆಸಿತ್ತು.  ಟಿಟಿವಿ ದಿನಕರನ್ ಬೆಂಬಲಿಗರು ಆಕ್ಷೇಪವೊಡ್ಡಿ ಸ್ಥಳಕ್ಕೆ ಬಂದು ಗಲಾಟೆ ಮಾಡಿದ್ದರಿಂದ ಅಶ್ರುವಾಯು ಸಿಡಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಎಎಂಎಂಕೆ ಕಾರ್ಯಕರ್ತರನ್ನು ಬಂಧಿಸಲಾಗಿದೆ. ದಾಳಿಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಸೂಪರಿಂಟೆಂಡೆಂಟ್ ಸ್ಥಳಕ್ಕೆ ಆಗಮಿಸಿ ಭದ್ರತೆಯ ಮೇಲ್ವಿಚಾರಣೆ ನಡೆಸಿದರು. (ಎಸ್.ಎಚ್)

Leave a Reply

comments

Related Articles

error: