ಕರ್ನಾಟಕಪ್ರಮುಖ ಸುದ್ದಿ

ಲೋಕಸಭಾ ಚುನಾವಣೆ – ಮತದಾನಕ್ಕೆ ಹಾಸನ ಜಿಲ್ಲಾಡಳಿತದ ಸಕಲ ಸಿದ್ಧತೆ ಪೂರ್ಣ

ಹಾಸನ (ಏ.17): ಲೋಕಸಭಾ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದೆ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಮಾರ್ಗದರ್ಶನದಲ್ಲಿ ಎಲ್ಲಾ ವಿಧಾನ ಸಭಾ ಕ್ಷೇತ್ರವಾರು ರ್ಯಾಂಡಮೈಜೇಷನ್ ಪ್ರಕ್ರಿಯೆ ನಡೆಯಿತು.

ಎಲ್ಲಾ ಚುನಾವಣಾ ಅಧಿಕಾರಿ, ಸಿಬ್ಬಂದಿಗಳು ಮತಯಂತ್ರ ಹಾಗೂ ವಿ.ವಿ. ಪ್ಯಾಟ್‍ಗಳೊಂದಿಗೆ ತಮಗೆ ನಿಯೋಜಿಸಿದ್ದ ಮತಗಟ್ಟೆಗಳನ್ನು ತಲುಪಿದ್ದಾರೆ. ಮತದಾನ ಪ್ರಕ್ರಿಯೆಗೆ ನೀಡಿದಷ್ಟು ಪ್ರಾಮುಖ್ಯತೆಯನ್ನು ಈ ಬಾರಿ ಚುನಾವಣಾ ಸಿಬ್ಬಂದಿಗಳ ಯೋಗಕ್ಷೇಮದ ಬಗ್ಗೆಯೂ ಒತ್ತು ನೀಡಲಾಗಿದೆ.

ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಉತ್ತಮ ಉಪಹಾರ, ಉಟೋಪಚಾರಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಸಿಬ್ಬಂದಿಗಳಿಗೆ ವ್ಯವಸ್ಥಿತ ತರಬೇತಿ ನೀಡಿ ಜೊತೆಗೆ ಬಿಸ್ಕೆಟ್, ಚಾಕೋಲೇಟ್, ಒ.ಆರ್.ಎಸ್ ಪುಡಿ, ಮಾತ್ರೆಗಳು, ಬ್ಯಾಂಡೇಜ್‍ಗೆ ಬೇಕಾದ ಬಟ್ಟೆಗಳನ್ನು ನೀಡಲಾಗಿದೆ.

ಇಂದು ಮಸ್ಟರಿಂಗ್ ಕೇಂದ್ರದಲ್ಲಿ ಎಲ್ಲಾ ಮತಗಟ್ಟೆ ಅಧಿಕಾರಿ ಸಿಬ್ಬಂದಿಗಳಿಗೆ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗಿತು. ತರಬೇತಿ ವ್ಯವಸ್ಥೆ ಬಗ್ಗೆಯೂ ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಚೇತನ್ ಸಿಂಗ್ ರಾಥೋಡ್ ಅವರು ವಿವಿಧ ತಾಲ್ಲೂಕುಗಳ ರ್ಯಾಂಡಮೈಜೇಷನ್ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಚುನಾವಣಾ ಕಾರ್ಯಕ್ಕೆ ನೇಮಕಗೊಂಡಿರುವ ಸಿಬ್ಬಂದಿಗಳನ್ನುದ್ದೇಶಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಡಾ. ಚೇತನ್ ಸಿಂಗ್ ರಾಥೋಡ್ ಅವರು ಮಾತನಾಡಿ ಯಾವುದೇ ಲೋಪಗಳಿಲ್ಲದಂತೆ ಕರ್ತವ್ಯ ನಿರ್ವಹಿಸಿ ಒತ್ತಡಗಳಿಗೆ ಒಳಗಾಗದೆ ಕೆಲಸ ಮಾಡಿ ತುರ್ತು ಸಂದರ್ಭದಲ್ಲಿ 1950 ಸಹಾಯವಾಣಿಗೆ ಕರೆ ಮಾಡಿ ಎಂದು ಅವರು ಹೇಳಿದರು.

ಹಾಸನದಲ್ಲಿ ಉಪವಿಭಾಗಾಧಿಕಾರಿ ಡಾ. ಹೆಚ್.ಎಲ್. ನಾಗರಾಜ್, ತಹಶೀಲ್ದಾರ್ ಶ್ರೀನಿವಾಸಯ್ಯ ಅವರು ಮಸ್ಟರಿಂಗ್ ಕಾರ್ಯ ನಡೆಸಿದರು.

ವಿಶೇಷ ಮತಗಟ್ಟೆಗಳ ಸ್ಥಾಪನೆ:
ಜಿಲ್ಲೆಯಲ್ಲಿ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 2 ರಂತೆ 14 ಕಡೆಗಳಲ್ಲಿ ಮಹಿಳಾ ಸಿಬ್ಬಂದಿಗಳೇ ಕಾರ್ಯನಿರ್ವಹಿಸುವ ‘ಸಖಿ’ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದಲ್ಲದೆ ‘ವಿಶೇಷ ಚೇತನರು’ ಕಾರ್ಯ ನಿರ್ವಹಿಸುವ 01 ಮತಗಟ್ಟೆಯನ್ನು ಹಾಸನ ನಗರದಲ್ಲಿ ಸ್ಥಾಪಿಸಲಾಗಿದೆ ಹಾಗೆಯೇ ಹಗರೆ ಬಳಿಯ ಅಂಗಡಿಹಳ್ಳಿಯಲ್ಲಿ ‘ಪರಂಪರ’ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.

ಗಮನ ಸೆಳೆಯುವ ಸೆಲ್ಫಿ ಸ್ಟಾಂಡ್‍ಗಳು:
ಈ ವಿಶೇಷ ಮತಗಟ್ಟೆಗಳಲ್ಲಿ ಹಾಸನ ಸ್ವೀಪ್ ಸಮಿತಿಯ ರಾಯಬಾರಿ ಚಂದನ್‍ಶೆಟ್ಟಿ ಅವರ ಸೆಲ್ಫಿ ಸ್ಟ್ಯಾಂಡ್‍ಗಳನ್ನು ಇರಿಸಲಾಗಿದೆ. ಮತದಾರರು ಇದರಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ. ಕೆ.ಎನ್ ವಿಜಯ್ ಪ್ರಕಾಶ್ ಎಲ್ಲಾ ಸಖಿ ಮತಗಟ್ಟೆಗಳು, ವಿಶೇಷ ಚೇತನ ಹಾಗೂ ಪರಂಪರ ಮತಗಟ್ಟೆಗಳಿಗೆ ಎರೆಡೆರೆಡು ಬಾರಿ ಭೇಟಿ ನೀಡಿ, ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ ಸಲಹೆ ಸೂಚನೆ ನೀಡಿದರು.

ಅಂತಿಮ ಮತದಾರರ ವಿವರ:
ಹಾಸನ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 2235 ಮತಗಟ್ಟೆಗಳಿದ್ದು 832320-ಪುರುಷ ಮತದಾರರು, 819643- ಮಹಿಳೆ ಮತದಾರರು ಮತ್ತು ಇತರೆ-36 ಮತದಾರರು ಸೇರದಂತೆ ಒಟ್ಟು 1651999 ಮತದಾರರು ಮತ ಚಲಾಯಿಸಲು ಅರ್ಹರಾಗಿರುತ್ತಾರೆ.

ಮತಗಟ್ಟೆಗಳಿಗೆ ನಿಯೋಜಿಸಲಾದ ಮತದಾನ ಸಿಬ್ಬಂದಿಗಳ ವಿವರ: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 1985 ಮತಗಟ್ಟೆಗಳಿದ್ದು, ಸದರಿ ಮತಗಟ್ಟೆಗಳಿಗೆ ಶೇ. 10% ರಷ್ಟು ಹೆಚ್ಚುವರಿ ಮತಗಟ್ಟೆ ಸಿಬ್ಬಂದಿಗಳನ್ನೊಳಗೊಂಡಂತೆ 2184 ಮತದಾನ ಕೇಂದ್ರಗಳಲ್ಲಿ ಅಧ್ಯಕ್ಷಾಧಿಕಾರಿ 2184, ಸಹಾಯಕ ಅಧ್ಯಕ್ಷಾಧಿಕಾರಿ 4365, ಎರಡನೇ ಮತ್ತು ಮೂರನೇ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 8734 ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ.

ಮಸ್ಟರಿಂಗ್ ಕಾರ್ಯದ ತಯಾರಿ ಕುರಿತು:
ಜಿಲ್ಲೆಯಲ್ಲಿ ಮತಗಟ್ಟೆಗಳಿಗೆ ನೇಮಕಗೊಂಡ ಮತದಾನ ಸಿಬ್ಬಂದಿಗಳನ್ನು ಒಂದು ವಿಧಾನಸಭಾ ಕ್ಷೇತ್ರಗಳಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಗಳಿಗೆ ತೆರಳಲು ಒಟ್ಟು 121 ಕೆ.ಎಸ್.ಆರ್.ಟಿ.ಸಿ. ಬಸ್ಸುಗಳನ್ನು ವ್ಯವಸ್ಥೆ ಮಾಡಲಾಯಿತು. ಇದೇ ವೇಳೆ ಮಸ್ಟರಿಂಗ್ ಕೇಂದ್ರಗಳಿಂದ ನಿಗಧಿಪಡಿಸಿದ ಮತಗಟ್ಟೆಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ತೆರಳಲು ರೂಪಿಸಿರುವ ರೂಟ್ ಮ್ಯಾಪ್‍ನಂತೆ ಒಟ್ಟು 300 ಬಸ್ಸುಗಳನ್ನು ಬಳಸಲಾಯಿತು. ಅಲ್ಲದೇ, ಇತರೆ ವಾಹನಗಳು ತೆರಳಲು ರೂಪಿಸಿರುವ ರೂಟ್ ಮ್ಯಾಪ್‍ನಂತೆ 102 ಜೀಪ್‍ಗಳು, 28 ಮ್ಯಾಕ್ಸಿ ಕ್ಯಾಬ್ ಮತ್ತು 65 ಮಿನಿ ಬಸ್ಸುಗಳನ್ನು ಬಳಸಿ ಮತಗಟ್ಟೆ ಸಿಬ್ಬಂದಿಗಳನ್ನು ಆಯಾ ಮತಗಟ್ಟೆಗಳಿಗೆ ತಲುಪಿಸಲಾಯಿತು.

ಸಹಾಯವಾಣಿ ಸ್ಥಾಪನೆ:
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಂ. 08172-251028/261028, ಮತದಾರರ ಸಹಾಯವಾಣಿ ಕೇಂದ್ರ 1950, ಸಹಾಯಕ ಚುನಾವಣಾಧಿಕಾರಿಗಳ ಕಚೇರಿ, ಹಾಸನ. 08172-268395/260395, ಸಹಾಯಕ ಚುನಾವಣಾಧಿಕಾರಿಗಳ ಕಚೇರಿ, ಚನ್ನರಾಯಪಟ್ಟಣ. 08176-252235/252314, ಸಹಾಯಕ ಚುನಾವಣಾಧಿಕಾರಿಗಳ ಕಚೇರಿ, ಅರಸೀಕೆರೆ. 08174-232270/234879, ಸಹಾಯಕ ಚುನಾವಣಾಧಿಕಾರಿಗಳ ಕಚೇರಿ, ಹೊಳೆನರಸೀಪುರ. 08175-273261/272111, ಸಹಾಯಕ ಚುನಾವಣಾಧಿಕಾರಿಗಳ ಕಚೇರಿ, ಸಕಲೇಶಪುರ. 08173-244003, 08173-244004/243012, ಸಹಾಯಕ ಚುನಾವಣಾಧಿಕಾರಿಗಳ ಕಚೇರಿ, ಬೇಲೂರು. 08177-222234/230800, ಸಹಾಯಕ ಚುನಾವಣಾಧಿಕಾರಿಗಳ ಕಚೇರಿ, ಅರಕಲಗೂಡು. 08175-220246/221736, ಸಹಾಯಕ ಚುನಾವಣಾಧಿಕಾರಿಗಳ ಕಚೇರಿ ಕಡೂರು 08267-221240.

ಮತದಾನಕ್ಕೆ ನಿಗದಿಪಡಿಸಿರುವ ದಾಖಲೆಗಳು:
ಪಾಸ್‍ಪೋರ್ಟ್, ಡ್ರೈವಿಂಗ್ ಲೈಸನ್ಸ್, ರಾಜ್ಯ/ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸಾರ್ವಜನಿಕ ವಲಯದ ಬ್ಯಾಂಕ್ / ಕಿಸಾನ್ ಮತ್ತು ಅಂಚೆ ಕಛೇರಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ, ಆದಾಯ ತೆರಿಗೆ ಗುರುತಿನ ಚೀಟಿ (Pಂಓ), ಆರ್.ಜಿ.ಐ. ಮತ್ತು ಎನ್.ಪಿ.ಆರ್. ರವರು ನೀಡಿರುವ ಭಾವಚಿತ್ರವಿರುವ ಸ್ಮಾರ್ಟ್ ಕಾರ್ಡ್, ಎಂ.ಎನ್.ಆರ್.ಇ.ಜಿ.ಎ. ರವರು ನೀಡಿರುವ ಉದ್ಯೋಗ ಗುರುತಿನ ಚೀಟಿ, ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್‍ಗಳು (ಕಾರ್ಮಿಕ ಮಂತ್ರಾಲಯ ಯೋಜನೆ), ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ ಪಿಂಚಣಿ ಪುಸ್ತಕ / ಪಿಂಚಣಿ ಸಂದಾಯ ಆದೇಶಗಳಂತಹ ಪಿಂಚಣಿ ದಾಖಲೆಗಳು, ವೃದ್ಧಾಪ್ಯ ವೇತನ ಆದೇಶಗಳು, ವಿಧವಾ ವೇತನ ಆದೇಶಗಳು, ಎಂಪಿ/ಎಂಎಲ್‍ಎ/ಎಂಎಲ್‍ಸಿ ಗಳಿಗೆ ನೀಡಿರುವ ಗುರುತಿನ ಚೀಟಿಗಳು, ಆಧಾರ್ ಕಾರ್ಡ್.

ಮತದಾನದ ದಿನ ರಜೆ ಘೋಷಣೆ:
ಏ.18ರ ಲೋಕಸಭಾ ಚುನಾವಣೆಯ ಸಂಬಂಧ ಮತದಾರರಿಗೆ ಮತದಾನ ಚಲಾಯಿಸಲು ಅನುಕೂಲವಾಗುವಂತೆ ಆಯಾ ಮತ ಕ್ಷೇತ್ರಗಳ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಛೇರಿಗಳಿಗೆ, ಶಾಲಾ ಕಾಲೇಜುಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಸರ್ಕಾರವು ಆಯಾ ಚುನಾವಣಾ ಕ್ಷೇತ್ರಗಳಿಗೆ ಚುನಾವಣೆ ನಡೆಯುವ ಏ.18 ರಂದು ಸಾರ್ವತ್ರಿಕ ರಜೆಯನ್ನು ಸರ್ಕಾರವು ಘೋಷಿಸಿದೆ.

ಪಾನ ನಿರೋಧ ದಿನ/ಒಣದಿನ ಘೋಷಿಸಿರುವ :
ಮತದಾನ ಮತ್ತು ಮತ ಎಣಿಕೆ ಕಾರ್ಯಗಳು ಸುಗಮವಾಗಿ ನಡೆಯಲು ಏ. 16 ರಂದು ಸಂಜೆ 6 ಗಂಟೆಯಿಂದ ಏ.19 ರಂದು ಬೆಳಿಗ್ಗೆ 6 ಗಂಟೆವರೆಗೆ ಮತ್ತು ಮೇ. 22 ರಂದು ಮಧ್ಯರಾತ್ರಿ 12 ಗಂಟೆಯಿಂದ ಮೇ. 24 ರಂದು ಬೆಳಿಗ್ಗೆ 6 ಗಂಟೆವರೆಗೆ ಹಾಸನ ಜಿಲ್ಲೆಯಾದ್ಯಂತ ಪಾನ ನಿರೋಧ (ಒಣ) ದಿನಗಳೆಂದು ಘೋಷಿಸಿ, ಈ ದಿನಾಂಕಗಳಂದು ಎಲ್ಲಾ ಬಗೆಯ ಅಮಲು ಪಾನೀಯ ಹಾಗೂ ಮದ್ಯ ಶೇಖರಣೆ, ಮದ್ಯ ಮಾರಾಟ ಹಾಗೂ ಸರಬರಾಜು ಮಾಡುವಂತಹ ಎಲ್ಲಾ ಬಗೆಯ ಸ್ಟಾರ್ ಹೋಟೆಲ್‍ಗಳು, ಡಾಬಾಗಳು, ರೆಸ್ಟೋರೆಂಟ್‍ಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ಹಾಗೂ ಮದ್ಯ ಸಾಗಾಟ ಮತ್ತು ಸರಬರಾಜು ಮಾಡುವುದನ್ನು ಸಹ ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.

ಜಿಲ್ಲಾದ್ಯಂತ ನಿಷೇದಾಜ್ಞೆ ಜಾರಿ:
ಏ.16ರ ಸಂಜೆ 6 ಗಂಟೆಯಿಂದ ಏ. 18ರ ಮಧ್ಯ ರಾತ್ರಿ 12 ಗಂಟೆಯವರೆಗೆ ಜಿಲ್ಲೆಯಲ್ಲಿ ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲೆಯಾದ್ಯಂತ ಸಿಆರ್‍ಪಿಸಿ 1973 ರ ಕಲಂ 144 ರಂತೆ, ಕರ್ನಾಟಕ ಪೊಲೀಸ್ ಕಾಯ್ದೆ 1973 ಕಲಂ 35 ರಂತೆ ಮತ್ತು ಪ್ರಜಾಪ್ರಾತಿನಿದ್ಯ ಕಾಯ್ದೆ 1951 ರ ಕಲಂ 130 & 131 ರಂತೆ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿರುತ್ತದೆ. ಐದು ಜನರಿಗಿಂತ ಹೆಚ್ಚು ಹೋಗುವುದನ್ನು ನಿಷೇಧಿಸಿದೆ. ಮನೆ-ಮನೆ ಪ್ರಚಾರಕ್ಕಾಗಿ ಐದು ಜನರಿಗೂ ಮೀರದೆ ತಂಡಗಳಲ್ಲಿ ಹೋಗಬಹುದಾಗಿದೆ.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು, ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಹಾಯಕ ಚುನಾವಣಾಧಿಕಾರಿಗಳ ಹಂತದಲ್ಲಿ ಸಾರ್ವಜನಿಕರು ದೂರುಗಳನ್ನು ದಾಖಲಿಸುವ ಮೊಬೈಲ್ ಅಪ್ಲಿಕೇಷನ್ ಇದಾಗಿದ್ದು, ಈ ಅಪ್ಲಿಕೇಷನ್ ಮೂಲಕ ಸಾರ್ವಜನಿಕರು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯ ಕುರಿತು ನೇರವಾಗಿ ದೂರುಗಳನ್ನು ದಾಖಲಿಸುವ ಸಂಬಂಧ ಜಿಲ್ಲೆಯಲ್ಲಿ ಹೆಚ್ಚಿನ ಪ್ರಚಾರ ನೀಡಲಾಗಿದ್ದು, ಈವರೆವಿಗೂ ಒಟ್ಟು 289 ದೂರುಗಳನ್ನು ಸ್ವೀಕರಿಸಲಾಗಿದ್ದು, ಸದರಿ ದೂರುಗಳಿಗೆ ಕಾಲಮಿತಿಯೊಳಗಾಗಿ ಮುಕ್ತಾಯಗೊಳಿಸಲಾಗಿರುತ್ತದೆ.

1950 ಜಿಲ್ಲಾ ಮಾಹಿತಿ ಕೇಂದ್ರ (ಮತದಾರರ ಸಹಾಯವಾಣಿ 1950):
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಜಿಲ್ಲಾ ಮಾಹಿತಿ ಕೇಂದ್ರವೆಂಬ ಮತದಾರರ ಸಹಾಯವಾಣಿ 1950 ಕೇಂದ್ರವನ್ನು ಸ್ಥಾಪಿಸಲಾಗಿರುತ್ತದೆ. ಈ ಕೇಂದ್ರಕ್ಕೆ ಮತದಾರರ/ಸಾರ್ವಜನಿಕರು ಉಚಿತ ಕರೆಗಳನ್ನು ಮಾಡಬಹುದಾಗಿದ್ದು, ಮತದಾರರ ಪಟ್ಟಿಗೆ ಸಂಬಂಧಿಸಿದ ಹಾಗೂ ಇತರೆ ಚುನಾವಣೆ ಸಂಬಂಧ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಈವರೆವಿಗೂ ಒಟ್ಟು 1286 ಕರೆಗಳು ಸ್ವೀಕರಿಸಲಾಗಿರುತ್ತದೆ.

ಜಿಲ್ಲೆಯಲ್ಲಿ ಈ ಹಿಂದಿನ ಚುನಾವಣೆಗಳು ಶಾಂತ ರೀತಿಯಲ್ಲಿ ನಡೆಯಲು ರಾಜಕೀಯ ಪಕ್ಷಗಳು ಮತ್ತು ಜನತೆ ಜಿಲ್ಲಾಡಳಿತದೊಂದಿಗೆ ಸಹಕರಿಸಿರುತ್ತಾರೆ. ಅದೇ ರೀತಿ ಈ ಚುನಾವಣೆಯನ್ನು ಶಾಂತಿ ಸುವ್ಯವಸ್ಥಿತ, ಪಾರದರ್ಶಕ ನ್ಯಾಯ ಸಮ್ಮತವಾಗಿ ನಡೆಸಲು ರಾಜಕೀಯ ಪಕ್ಷಗಳ ನಾಯಕರು, ಮತದಾರರು, ಸಾರ್ವಜನಿಕರು ಮತ್ತು ಮಾಧ್ಯಮ ಮಿತ್ರರು ಎಲ್ಲಾ ರೀತಿಯಲ್ಲಿ ಜಿಲ್ಲಾಡಳಿತಕ್ಕೆ ಸಹಕರಿಸುವಂತೆ ಕೋರಲಾಗಿದೆ. (ಎನ್.ಬಿ)

Leave a Reply

comments

Related Articles

error: