ಪ್ರಮುಖ ಸುದ್ದಿ

ಮತದಾನ ಮಾಡಿದವರಿಗೆ ಉಚಿತ ಇಎನ್‍ಟಿ ತಪಾಸಣೆ

ರಾಜ್ಯ(ಮಡಿಕೇರಿ) ಏ.17 :- ‘ಮತದಾನ’ ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದ್ದು, ಇಂತಹ ಮತದಾನಕ್ಕೆ ಜನ ಸಾಮಾನ್ಯರಿಗೆ ಪ್ರೇರಣೆ ಮತ್ತು ಉತ್ತೇಜನ ನೀಡುವ ಸಲುವಾಗಿ ನಗರದ ಅಮೃತ ಇಎನ್‍ಟಿ ಕೇರ್‍ನಲ್ಲಿ ‘ಮತದಾನ ಮಾಡಿದವರಿಗೆ ಉಚಿತ ತಪಾಸಣೆ’ಯನ್ನು ಏ.18 ರಂದು ಏರ್ಪಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಮೃತ ಇಎನ್‍ಟಿ ಕೇರ್‍ನ ಪ್ರಮುಖರು ಹಾಗೂ ಕರ್ನಾಟಕ ಇಎನ್‍ಟಿ ಅಸೋಸಿಯೇಷನ್ ಅಧ್ಯಕ್ಷ ಡಾ.ಮೋಹನ್‍ಅಪ್ಪಾಜಿ, ಮತ ಚಲಾಯಿಸಿದವರಿಗೆ ಮತದಾನದ ದಿನ ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಕಿವಿ, ಮೂಗು ಮತ್ತು ಗಂಟಲು ತಪಾಸಣೆಯನ್ನು ನಗರದ ರಾಜಾಸೀಟು ರಸ್ತೆಯ ಅಮೃತ ಕ್ಲಿನಿಕ್‍ನಲ್ಲಿ ಉಚಿತವಾಗಿ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೊಡಗಿನಲ್ಲಿ ಶಿಕ್ಷಣವಂತರ ಸಂಖ್ಯೆ ಹೆಚ್ಚಾಗಿದ್ದು, ಇಲ್ಲಿನ ಪ್ರತಿಯೊಬ್ಬರು ಮತದಾನದ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಬೇಕು, ಈ ಹಿನ್ನೆಲೆಯಲ್ಲಿ ಮತದಾನಕ್ಕೆ ಪ್ರೇರಣೆ ನೀಡಲು ಉಚಿತ ತಪಾಸಣೆಯನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
‘ವರ್ಟಿಗೋ’ ಕ್ಲಿನಿಕ್ ಉದ್ಘಾಟನೆ
ಅಮೃತ ಕ್ಲಿನಿಕ್‍ನಲ್ಲಿ ನೂತನ ವರ್ಟಿಗೋ ಕ್ಲಿನಿಕ್‍ನ್ನು ಏ.21 ರಂದು ಖ್ಯಾತ ಇಎನ್‍ಟಿ ತಜ್ಞರಾದ ಪ್ರೊ.ಶ್ರೀನಿವಾಸ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತಜ್ಞ ವೈದ್ಯರಾದ ಡಾ.ದೇವಯ್ಯ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಜನ ಸಾಮಾನ್ಯರಲ್ಲಿ ಕಾಣಿಸಿಕೊಳ್ಳುವ ತಲೆ ಸುತ್ತು, ಆಲಸ್ಯ, ನಡೆಯುವಾಗ ಸಮತೋಲನ ತಪ್ಪುವುದು, ನಿದ್ದೆಯಿಂದ ಎದ್ದ ಸಂದರ್ಭ ತಲೆ ತಿರುಗುವ ಸಮಸ್ಯೆಗಳಿಗೆ ಕಣ್ಣು, ಕಿವಿ, ಮಿದುಳಿನ ಸಮಸ್ಯೆಗಳು ಕಾರಣವಾಗಿರಬಹುದು. ಸಮಸ್ಯೆಗೆ ಕಾರಣವನ್ನು ವರ್ಟಿಗೋ ಕ್ಲಿನಿಕ್‍ನಲ್ಲಿ ಕಂಡುಕೊಳ್ಳಬಹುದು ಮತ್ತು ಸಮಸ್ಯೆಯನ್ನು ವ್ಯಾಯಾಮದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದ ಡಾ.ಮೋಹನ್ ಅಪ್ಪಾಜಿ ಮಿದುಳಿನ ತೊಂದರೆಗಳಿಂದ ಶೇ. 20 ರಷ್ಟು ಕಂಡು ಬಂದರೆ, ಶೇ.80 ರಷ್ಟು ಇತರೆ ಕಾರಣಗಳಿಂದ ಕಂಡು ಬರುತ್ತದೆ ಎಂದರು.
ನೂತನ ಅಮೃತ ವರ್ಟಿಗೋ ಕ್ಲಿನಿಕ್‍ನಲ್ಲಿ ಏ.23 ರಂದು ಮಧ್ಯಾಹ್ನ 3 ಗಂಟೆಯ ಬಳಿಕ ಉಚಿತ ತಪಾಸಣೆಯನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಮೊಬೈಲ್ ಸಂಖ್ಯೆ 8792874030, 08272-221460 ಮೂಲಕ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದೆಂದರು.
ಸುದ್ದಿಗೋಷ್ಠಿಯಲ್ಲಿ ಆಡಿಯೋಲಾಜಿಸ್ಟ್ ಅಚ್ಚಯ್ಯ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: