ಕರ್ನಾಟಕಪ್ರಮುಖ ಸುದ್ದಿ

ಶಾಂತಿಯುತ, ನ್ಯಾಯಸಮ್ಮತ ಚುನಾವಣೆ ನಡೆಯಲಿ: ಮನೀಷ್ ಮುದ್ಗಿಲ್

ಹಾಸನ (ಏ.18): ಹಾಸನ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಕೇವಲ 12 ಗಂಟೆಗಳಷ್ಟೇ ಬಾಕಿ ಉಳಿದಿದ್ದು ಚುನಾವಣಾ ಸಂಬಂದ ಯಾವುದೇ ರೀತಿಯ ಅಹಿತಕರ ಘಟನೆಗಳು ಹಾಗೂ ಚುನಾವಣಾ ಅಕ್ರಮಗಳು ನಡೆಯದಿರಲು ಗಮನಹರಿಸುವಂತೆ ಪಕ್ಷದ ಏಜೆಂಟರ್‍ಗಳಿಗೆ ಚುನಾವಣಾ ಆಯೋಗದ ಜಾರಿ ವಿಭಾಗದ ವಿಶೇಷಾಧಿಕಾರಿಯವರಾದ ಮನೀಷ್ ಮುದ್ಗಿಲ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಬುಧವಾರ, ಚುನಾವಣಾ ಅಭ್ಯರ್ಥಿಗಳು ಅಥವಾ ಏಜೆಂಟರ್‍ಗಳ ಪರವಾದ ಪ್ರತಿನಿಧಿಗಳ ಸಭೆ ನಡೆಸಿ ಶಾಂತಿಯುತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅವಕಾಶ ಮಾಡಿಕೊಡಬೇಕು ತಮ್ಮಿಂದ ಆಯೋಗಕ್ಕೇ ಏನಾದರು ದೂರುಗಳಿದ್ದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಬಹುದಾಗಿದ್ದು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ನಿರಂತರ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರಲ್ಲದೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಕರ್ತವ್ಯ ನಿರ್ವಹಿಸಲು ದಿನದ 24 ಗಂಟೆ ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ಹಾಗೂ ಕ್ಷೇತ್ರ ವ್ಯಾಪ್ತಿಯ ಗಡಿ ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿನ ಚೆಕ್‍ಪೋಸ್ಟ್‍ಗಳಲ್ಲಿಯೂ ಕಟ್ಟು ನಿಟ್ಟಿನ ಕಣ್ಗಾವಲು ಪಡೆ ರಚಿತವಾಗಿವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮತದಾನದ ದಿನದಂದು ನಡೆಯುವ ಎಲ್ಲಾ ಕಾರ್ಯಗಳ ಕುರಿತು ಹಾಗೂ ಮತಗಟ್ಟೆ ವ್ಯಾಪ್ತಿಯಲ್ಲಿ ನಡೆಯುವ ಘಟನೆಗಳು, ಇತರೆ ಮಾಹಿತಿಗಳನ್ನು ಪಡೆಯಲು ಜಿಲ್ಲಾ ಕೇಂದ್ರ ಹಾಗೂ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ಸಹಾಯಕ ಕೇಂದ್ರ/ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದ್ದು, ಈ ಸಂಬಂಧ ಯಾವುದೇ ರೀತಿಯ ದೂರು/ ಸಲಹೆಗಳಿದ್ದರೆ ನಮ್ಮನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಯಲ್ಲಿ ಮತದಾನ ಕಾರ್ಯವನ್ನು ನಿರ್ವಹಿಸಲು ಇಂದು ಮತದಾನ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ತಲುಪಿಸುವ ಮಸ್ಟರಿಂಗ್ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಲ್ಲಾ ಮತಗಟ್ಟೆ ಸಿಬ್ಬಂದಿಗಳ ತಂಡವು ಆಯಾ ಮತಗಟ್ಟೆಗಳನ್ನು ಸುರಕ್ಷಿತವಾಗಿ ತಲುಪಿರುತ್ತಾರೆ ಎಂದು ತಿಳಿಸಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಸಾರ್ವಜನಿಕರು ಅಥವಾ ಮತದಾರರು ಜಿಲ್ಲಾ ಕೇಂದ್ರ ಹಾಗೂ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ಕಂಟ್ರೋಲ್ ರೂಂ ಹಾಗೂ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಇದಲ್ಲದೆ ಜಿಲ್ಲಾ ಮಾಹಿತಿ ಕೇಂದ್ರವೆಂಬ ಮತದಾರರ ಸಹಾಯವಾಣಿ 1950 ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಕ್ಕೆ ಮತದಾರರ/ ಸಾರ್ವಜನಿಕರು ಉಚಿತ ಕರೆಗಳನ್ನು ಮಾಡಬಹುದಾಗಿದೆ ಎಂದು ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ.ಚೇತನ್ ಸಿಂಗ್ ರಾಥೋಡ್ ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಯವರಾದ ಎಂ.ಎಲ್.ವೈಶಾಲಿ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಪ್ರಿಯಾಂಗ.ಎಂ. ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: