ಮೈಸೂರು

ಸುಭಾಷ್ ಚಂದ್ರ ಬೋಸ್ ರ ಆದರ್ಶ ಎಲ್ಲರಿಗೂ ಮಾದರಿ : ಎಂ.ಎನ್.ಶ್ರೀರಾಮ್

ಆದರ್ಶ, ಸಾಮಾಜಿಕ ಗುರಿ, ತ್ಯಾಗ, ಬಲಿದಾನ ಮಾಡಿ ದೇಶಕ್ಕಾಗಿ ಹೋರಾಡುವವರು ಮಹಾನ್ ವ್ಯಕ್ತಿಗಳು. ಅಂತಹ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಅಗ್ರಮಾನ್ಯರಾಗಿ ನಿಲ್ಲುತ್ತಾರೆ ಎಂದು ಎಸ್‍ಯುಸಿಐ ರಾಜ್ಯ ಸಮಿತಿ ಸದಸ್ಯ ಎಂ.ಎನ್.ಶ್ರೀರಾಮ್ ಅಭಿಪ್ರಾಯಪಟ್ಟರು.

ಮಂಗಳವಾರ ಮೈಸೂರಿನ ಗೋವರ್ಧನ್ ಹೋಟೆಲ್ ಸಭಾಂಗಣದಲ್ಲಿ ಎಸ್‍ಯುಸಿಐ ವತಿಯಿಂದ ಆಯೋಜಿಸಿದ್ದ ನೇತಾಜಿ ಮತ್ತು ಸಮಾಜವಾದದ ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ನೇತಾಜಿ ಭಾರತದ ಇತಿಹಾಸದಲ್ಲಿ ಉನ್ನತ ಶಿಖರದಲ್ಲಿರುವ ವ್ಯಕ್ತಿ. ದೇಶಕ್ಕಾಗಿ ಹೋರಾಡಿ ಪ್ರಾಣವನ್ನೇ ಬಲಿ ಕೊಟ್ಟ ಮಹಾನ್ ಹೋರಾಟಗಾರ. ಸಾಮಾಜಿಕ ಸುಧಾರಣೆಗೆ, ಸಮಸಮಾಜ ನಿರ್ಮಾಣಕ್ಕೆ ಹಗಲಿರುಳೆನ್ನದೆ ಅವಿರತ ದುಡಿದರು. ಬ್ರಿಟೀಷರಿಂದ ದೇಶಕ್ಕೆ ಮುಕ್ತಿ ದೊರಕಿಸಲು ಶ್ರಮಿಸಿದರು. ಅವರ ಆದರ್ಶನೀಯ ಹಾಗೂ ಹೋರಾಟದ ಬದುಕು ಎಲ್ಲಾ ವರ್ಗದವರಿಗೂ ಮಾದರಿ ಎಂದು ಹೇಳಿದರು.

ಇಂದಿನ ಆಧುನಿಕ ಸಮಾಜದಲ್ಲಿ ಮಹಾನ್ ವ್ಯಕ್ತಿಗಳ ಕುರಿತು ಕಾರ್ಯಕ್ರಮ ಆಯೋಜಿಸುವ ಅಗತ್ಯತೆ ಇದೆ. ಸರ್ಕಾರ, ಸಂಘಸಂಸ್ಥೆಗಳು ಎಲ್ಲಾ ಮಹನೀಯರ ಜಯಂತಿಗಳನ್ನು ವರ್ಷಕ್ಕೊಮ್ಮೆ ಸಾಂಪ್ರದಾಯಿಕವಾಗಿ, ವಿಜೃಂಭಣೆಯಿಂದ ಆಚರಿಸುತ್ತವೆ. ಆದರೆ ಆ ಜಯಂತಿಗಳಿಂದ ಸಮಾಜಕ್ಕೆ ಆಗುವ ಒಳಿತಾದರು ಏನು ಎಂಬುದನ್ನು ಯಾರೂ ಚಿಂತಿಸುವುದಿಲ್ಲ. ಇಂದು ಮಹನೀಯರ ಜಯಂತಿಗಳಿಗೆ ವಿಜೃಂಭಣೆಯ ಸ್ಪರ್ಶ ಬೇಕಿಲ್ಲ. ಅದರಿಂದ ಏನನ್ನಾದರೂ ಕಲಿಯಬೇಕು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಹನೀಯರ ಜಯಂತಿಗಳು ಸಾರ್ಥಕವಾಗುತ್ತವೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ಯುವಜನತೆಗೆ, ವೃದ್ಧರಿಗೆ, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆಗಳು ಇದ್ದೇ ಇರುತ್ತವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಇತಿಹಾಸ, ಮಹನೀಯರ ಜೀವನ ಚರಿತ್ರೆ ಸೇರಿದಂತೆ ವಾಸ್ತವ ಸಂಗತಿಗಳ ಜ್ಞಾನ ಅವಶ್ಯಕ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಕೊಡಬೇಕು. ಆದರೆ ಓದುವುದನ್ನೇ ಜೀವನದ ಪರಮೋದ್ದೇಶವನ್ನಾಗಿ ಮಾಡಿಕೊಳ್ಳಬಾರದು. ಶಿಕ್ಷಣ ತಪಸ್ಸಾದರೆ ಮನುಷ್ಯ ಮನುಷ್ಯನಾಗಿ ಜೀವಿಸಲು ಸಾಧ್ಯವಿಲ್ಲ. ಸಾಮಾಜಿಕ ಮೌಲ್ಯಗಳನ್ನಿಟ್ಟುಕೊಂಡು ಸಮಾಜಕ್ಕೆ ಸ್ಪಂದಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‍ಯುಸಿಐ ಜಿಲ್ಲಾ ಕಾರ್ಯದರ್ಶಿ ಬಿ.ರವಿ. ಜಿಲ್ಲಾ ಸಮಿತಿ ಸದಸ್ಯರಾದ ಎಂ.ಉಮಾದೇವಿ, ಯಶೋಧರ್, ಸಂಧ್ಯಾ, ಸೀಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: