ದೇಶ

ಪಾಕಿಸ್ತಾನ ಉಗ್ರ ರಾಷ್ಟ್ರ: ವಿಶ್ವಸಂಸ್ಥೆಯಲ್ಲಿ ಭಾರತ ಪ್ರತಿಪಾದನೆ

ನ್ಯೂಯಾರ್ಕ್: ಭಾರತದ ವಿರುದ್ಧ ಭಯೋತ್ಪಾದನೆ ನಡೆಸುವುದನ್ನು ಮೊದಲಿನಿಂದಲೂ ನಡೆಸಿಕೊಂಡು ಬಂದಿರುವ ಪಾಕಿಸ್ತಾನ ಉಗ್ರ ರಾಷ್ಟ್ರ  ಎಂದು ವಿಶ್ವಸಂಸ್ಥೆಯಲ್ಲಿ ಭಾರತ ತರಾಟೆಗೆ ತೆಗೆದುಕೊಂಡಿದೆ.

ವಿಶ್ವಸಂಸ್ಥೆಯ 71ನೇ ಸಾಮಾನ್ಯ ಅಧಿವೇಶನದಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಭಾರತವನ್ನು ಟೀಕಿಸಿ ಭಾಷಣವನ್ನು ಮುಗಿಸುತ್ತಿದ್ದಂತೆ ಭಾರತ ಪಾಕಿಸ್ತಾನದ ಆರೋಪನ್ನು ತಳ್ಳಿಹಾಕಿದೆ. ವಿಶ್ವಸಂಸ್ಥೆಗೆ ಭಾರತದ ಮೊದಲ ಕಾಯಂ ಕಾರ್ಯದರ್ಶಿಯಾಗಿರುವ ಏನಮ್ ಗಂಭೀರ್ ಮಾತನಾಡಿ, ವಿಶ್ವಸಂಸ್ಥೆಯೇ ಉಗ್ರರೆಂದು ಘೋಷಿಸಿರುವವ ವ್ಯಕ್ತಿಗಳು ಪಾಕಿಸ್ತಾನದಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಪಾಕ್ ಉಗ್ರರಿಗೆ ಆರ್ಥಿಕ ನೆರವು ನೀಡುವುದಲ್ಲದೇ, ನೆರೆ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯನ್ನು ಬಳಸುತ್ತಿದೆ. ಪಾಕಿಸ್ತಾನದ ಈ ಕೃತ್ಯಗಳಿಂದ ಭಾರತ ಸೇರಿ ಇತರ ರಾಷ್ಟ್ರಗಳು ತೊಂದರೆ ಅನುಭವಿಸುತ್ತಿವೆ. ಭಯೋತ್ಪಾದನೆ ಎಲ್ಲೆಡೆ ಹಬ್ಬಿದೆ ಎಂದು ಗಂಭೀರ್ ಆರೋಪಿಸಿದ್ದಾರೆ.

ಓರ್ವ ಉಗ್ರನ ಹತ್ಯೆ: ಉರಿ ಸೇನಾನೆಲೆ ಮೇಲೆ ಉಗ್ರರ ದಾಳಿ ನಡೆಸಿ ಯೋಧರನ್ನು ಕೊಂದುಹಾಕಿದ ಪ್ರಕರಣದ ಬೆಂಕಿ ಇನ್ನೂ ಆರಿಲ್ಲ, ಅಷ್ಟರಲ್ಲೇ ಮತ್ತೆ ಕಾಶ್ಮೀರದ ಬಂಡಿಪೊರಾದಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರಿಂದ ದಾಳಿ ನಡೆದಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಭಾರತೀಯ ಸೇನಾಪಡೆಗಳು ಹೊಡೆದುರುಳಿಸಿವೆ. ಅವಿತಿರುವ ಮತ್ತಷ್ಟು ಉಗ್ರರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.

ಕಳೆದ ಭಾನುವಾರ ಉರಿ ಸೇನಾನೆಲೆ ಮೇಲೆ ದಾಳಿ ನಡೆದ ವೇಳೆ ಭಾರತಕ್ಕೆ 12 ಉಗ್ರರು ನುಸುಳಿದ್ದಾರೆ ಎನ್ನಲಾಗಿದ್ದು, ಇವರಲ್ಲಿ ನಾಲ್ಕು ಮಂದಿಯ ಹತ್ಯೆ ನಡೆದಿದೆ. ಉಳಿದ 8 ಮಂದಿಗಾಗಿ ಶೋಧನೆ ಮುಂದುವರಿದಿದೆ.

Leave a Reply

comments

Related Articles

error: