ಮೈಸೂರು

ಶಾಸಕ ಎಸ್.ಎ.ರಾಮದಾಸ್ ಬಳಿ 25ಲಕ್ಷರೂ ಗೆ ಪತ್ರಕರ್ತನಿಂದ ಬೇಡಿಕೆ : ಕಾನೂನು ಕ್ರಮಕ್ಕೆ ಮುಂದಾದ ಶಾಸಕರು

ಮೈಸೂರು,ಏ.19:- ಹಾಯ್ ಬೆಂಗಳೂರು ಪಾಕ್ಷಿಕ ಪತ್ರಿಕೆಯಲ್ಲಿ ಮಾನಹಾನಿ ಲೇಖನ ಪ್ರಕಟಿಸುತ್ತೇನೆಂದು ಬೆದರಿಸಿ 25ಲಕ್ಷರೂ.ಗೆ ಬೇಡಿಕೆಯಿಟ್ಟ ಪತ್ರಕರ್ತನ ವಿರುದ್ಧ ದೂರು ನೀಡಿರುವುದಾಗಿ ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಅವರು ರವೀಶ್ ಸಾರಥ್ಯದಲ್ಲಿ ಹಾಯ್ ಬೆಂಗಳೂರು ಪಾಕ್ಷಿಕ ಪತ್ರಿಕೆಯ ವರದಿಗಾರ ಪ್ರದೀಪ್ , ಎಂ.ಮಧುಕುಮಾರ್ ಹಾಗೂ ಅವರ ಸಂಪಾದಕರ ಮತ್ತು ಶರತ್ ಕುಮಾರ್ ಎಂ.ಬಿ.ಅವರ ನಿರ್ದೇಶನದಂತೆ ಪತ್ರಿಕೆಯಲ್ಲಿ ನನ್ನ ಹಾಗೂ ನನ್ನ ಸಹೋದರ ಶ್ರೀಕಾಂತ್ ದಾಸ್ ವಿರುದ್ಧ ಮಾನಹಾನಿ ಲೇಖನವನ್ನು ಬರೆದು ಅದನ್ನು ಬರಲಿರುವ ದಿನಗಳಲ್ಲಿ ಪ್ರಕಟಿಸಿ ಮಾನಹಾನಿಪಡಿಸುತ್ತೇವೆಂದು ಬೆದರಿಸಿ 25ಲಕ್ಷರೂ.ಗಳಿಗೆ ಬೇಡಿಕೆಯಿಟ್ಟು ಹಣ ನೀಡದಿದ್ದರೆ ಅದನ್ನು ಪ್ರಕಟಿಸುತ್ತೇವೆಂದು ಹೇಳಿ 15/4/2019ರ ಬೆಳಿಗ್ಗೆ ಕಛೆರಿಗೆ ಒಂದು ಪತ್ರಿಕೆ ತಲುಪಿಸಿದ್ದರು. ಅದರಿಂದ ನಮ್ಮನ್ನು ಹೆದರಿಸಿ ಹಣವನ್ನು ವಸೂಲು ಮಾಡಲು ಪ್ರಯತ್ನಿಸಿದ್ದರು. ಈ ಕುರಿತು ನಾನು ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ತಿಳಿಸಿದರು.

ಈ ಪತ್ರಕರ್ತರು ನಮ್ಮನ್ನು ವೈಯುಕ್ತಿಕವಾಗಿ ಭೇಟಿಯಾಗ ಬಯಸುತ್ತಿದ್ದರು. ಆದರೆ ನಾನು ಅವಕಾಶ ನೀಡಿರಲಿಲ್ಲ. ನನ್ನ ಸಹೋದರನ್ನೂ ಭೇಟಿಯಾಗಬಯಸಿದ್ದರು. ಆದರೆ ನಾವಿಬ್ಬರು ಭೇಟಿಗೆ ನಿರಾಕರಿಸಿದ್ದೆವು. ಜಯದೇವ ಆಸ್ಪತ್ರೆಯ ವೈದ್ಯ ಡಾ.ಮಧು ಈ ಕುರಿತು ನನಗೆ ಸಾಕಷ್ಟು ಸಂದೇಶ ಕಳಿಸಿದ್ದರು. ವೈದ್ಯರ ಭೇಟಿಗೆ ಒಪ್ಪಿ ಅವರ ಫಾರ್ಮ್ ಹೌಸ್ ಗೆ ತೆರಳಿದ್ದೆ. ನನ್ನ ಸಹಾಯಕರಿಗೆ ಅಲ್ಲಿ ಏನೆಲ್ಲ ಆಗಲಿದೆ ಅದರ ಮಾಹಿತಿ ದಾಖಲಿಸುವಂತೆ ಸೂಚಿಸಿದ್ದೆ. ಪ್ರದೀಪ್ ಮಧುಕುಮಾರ್ ಎಂಬ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಸೂಚನೆ ನೀಡಿದ್ದ. ನಿಮ್ಮ ಬಗ್ಗೆ ಅವಹೇಳನಕಾರಿ ವರದಿಯನ್ನು ಪ್ರಿಂಟ್ ಮಾಡಲಾಗಿದೆ ಎಂದು ಮಾರ್ಕೆಟ್ ಗೆ ಬರದ ಪ್ರತಿ ತೋರಿಸಿದ್ದ. ಪ್ರಿಂಟ್ ಆದ್ರೂ ಪರ್ವಾಗಿಲ್ಲ. ನಮ್ಮನ್ನು ಸೋಡ್ಕೊಳ್ಳಿ ಎಂದಿದ್ದ. ಡಾಕ್ಟರ್ ಮಧು ಡೀಲ್ ನ ಮುಂದಾಳತ್ವ ವಹಿಸಿದ್ದ. ಪ್ರಿಂಟ್ ಆಗಿರುವ ಪ್ರತಿ ಸುಟ್ಟುಹಾಕಲು 25ಲಕ್ಷರೂ.ಬೇಡಿಕೆ ಇಟ್ಟಿದ್ದರು ಎಂದರು. ಈ ಡೀಲ್ ನಲ್ಲಿ ರೈತ ಸಂಘದ ಮುಖಂಡರೋರ್ವರು, ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ಹಾಗೂ ಹಿರಿಯ ವರದಿಗಾರರ ಶೇರ್ ಕೂಡ ಇದೆ ಎಂದು ಡಾಕ್ಟರ್ ಮಧು ಬಾಯ್ಬಿಟ್ಟಿದ್ದು, ಈ ವಿಚಾರವನ್ನು ಕೂಡ ದಾಖಲಿಸಲಾಗಿದೆ ಎಂದು ತಿಳಿಸಿದರು. ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರು ಪ್ರದೀಪನನ್ನು 200ಪ್ರತಿಗಳ ಜೊತೆ 50ಸಾವಿರ ರೂ. ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಲಿದ್ದು ವೈದ್ಯ ಮಧು ಹಾಗೂ ಪತ್ರಿಕೆಯ ಸಂಪಾದಕ ಬಳಗವನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಪಾಲುದಾರಿಕೆಯಲ್ಲಿ ಸಾಕಷ್ಟು ಮಂದಿಯ ಹೆಸರಿದ್ದು, ಎಲ್ಲರ ಮೇಲೂ ದೂರು ನೀಡಲಾಗಿದೆ ಎಂದರು.

ಡೀಲಿಂಗ್ ಪತ್ರಿಕೆಗಳ ಮೇಲೆ ದೇಹಲಿಯಲ್ಲಿ ಪತ್ರಿಕಾ ನೋಂದಣಿ ಕಛೇರಿಗೆ ದೂರು ನೀಡಲಿದ್ದೇನೆ. ಚುನಾವಣಾ ಸಮಯದಲ್ಲಿ ಇಂತಹ ಕೃತ್ಯಗಳು ಹೆಚ್ಚಾಗುತ್ತಿದ್ದು, ಯಾವುದೇ ವ್ಯಕ್ತಿಯಾಗಲೀ ಅಥವಾ ಯಾವುದೇ ವಿಚಾರಕ್ಕೆ ಹಣದ ಬೇಡಿಕೆ ಇಟ್ಟಿದ್ದೇ ಆದಲ್ಲಿ ಕೂಡಲೇ ಪೊಲೀಸರನ್ನು ಸಂಪರ್ಕಿಸಿ ಎಂದರು. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: