
ಕರ್ನಾಟಕಪ್ರಮುಖ ಸುದ್ದಿ
ದೇವೇಗೌಡರಿಗೆ ಮತ್ತೆ ಪ್ರಧಾನಿಯಾಗುವ ಆಸೆ: ಯಡಿಯೂರಪ್ಪ ಟೀಕೆ
ಬೆಂಗಳೂರು (ಏ.19): ಕೇವಲ ಏಳು ಸ್ಥಾನಗಳಲ್ಲಿ ಲೋಕಸಭೆಗೆ ಸ್ಪರ್ಧಿಸುತ್ತಿರುವ ಜೆಡಿಎಸ್ ಮುಖ್ಯಸ್ಥ ಎಚ್ ಡಿ ದೇವೇಗೌಡ ಅವರು 2019ರ ಲೋಕಸಭಾ ಚುನಾವಣೆಯ ಬಳಿಕ ದೇಶದ ಪ್ರಧಾನಿಯಾಗುವ, ಇಲ್ಲವೇ ಪ್ರಧಾನಿಗೆ ಸಲಹೆಗಾರನಾಗುವ ದೊಡ್ಡ ಕನಸನ್ನು ಕಾಣುತ್ತಿದ್ದಾರೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಟೀಕಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿಯಾದರೆ ತಾನು ಅವರ ಪಕ್ಕದಲ್ಲೇ ಕೂರುವೆ ಎಂದು ದೇವೇಗೌಡರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸುತ್ತಿದ್ದ ಬಿಜೆಪಿ ನಾಯಕ ಯಡಿಯೂರಪ್ಪ ಅವರು, ದೇವೇಗೌಡರಿಗೆ ದೇಶದ ಪ್ರಧಾನಿಯಾಗುವ ಇಲ್ಲವೇ ಪ್ರಧಾನಿಯ ಸಲಹೆಗಾರನಾಗುವ ಆಸೆ ಇರುವುದು ಸ್ಪಷ್ಟವಿದೆ ಎಂದು ಹೇಳಿದರು.
ಬಿಜೆಪಿ ಹಿರಿಯ ನಾಯಕ ಲಾಲಕೃಷ್ಣ ಆಡ್ವಾಣಿ ಅವರ ಹಾಗೆ ನಾನು ರಾಜಕಾರಣದಿಂದ ನಿವೃತ್ತನಾಗುವುದಿಲ್ಲ; ದೇಶದ ಜನರ ಸೇವೆಯಲ್ಲಿ ತೊಡಗಿಕೊಂಡಿರುತ್ತೇನೆ ಎಂದು ದೇವೇಗೌಡ ಹೇಳಿದ್ದರು. ದೇವೇಗೌಡರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಬಿಜೆಪಿಯ ಜಿ ಎಸ್ ಬಸವರಾಜ್ ಎದುರಾಳಿಯಾಗಿದ್ದಾರೆ. (ಎನ್.ಬಿ)