ಕರ್ನಾಟಕಪ್ರಮುಖ ಸುದ್ದಿ

ರಮೇಶ್‌ ಜಾರಕಿಹೋಳಿ ಬಿಜೆಪಿ ಬೆಂಬಲಿಸುವ ಸಾಧ್ಯತೆ ಇದೆ!: ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ (ಏ.22): ಕಾಂಗ್ರೆಸ್ ಬೆಂಬಲಿಸುವಂತೆ ನಾವು ಮನವಿ ಮಾಡುವುದಿಲ್ಲ. ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಅಭ್ಯರ್ಥಿಯಾಗಿ ಉಪ ಚುನಾವಣೆ ಎದುರಿಸಬಹುದು ಎಂದು ಸತೀಶ್ ಜಾರಕಿಹೊಳಿ ಸುಳಿವು ನೀಡಿದ್ದಾರೆ. ಇದರಿಂದ ಅರಣ್ಯ ಸಚಿವ ಮತ್ತು ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ ನೀಡಿರುವ ಈ ಹೇಳಿಕೆ ಬೆಳಗಾವಿ ರಾಜಕಾರಣದಲ್ಲಿ ಹೊಸ ಲೆಕ್ಕಾಚಾರವನ್ನು ಹುಟ್ಟುಹಾಕಿದೆ. ಲೋಕಸಭಾ ಚುನಾವಣೆಯಲ್ಲಿಯೂ ರಮೇಶ್ ಬಿಜೆಪಿ ಪರವಾಗಿ ಕೆಲಸ ಮಾಡಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಶನಿವಾರ ತಮ್ಮ ಬೆಂಬಲಿಗರ ಸಭೆ ಕರೆದಿದ್ದ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಬಾರದು ಎಂದು ಸೂಚನೆ ನೀಡಿದ್ದರು. ಏಪ್ರಿಲ್ 23ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಸಚಿವ ಸಂಪುಟದಿಂದ ಕೈ ಬಿಟ್ಟ ಬಳಿಕ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಂದ ದೂರವಿದ್ದಾರೆ. ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿಬಂದಿತ್ತು.

ಲೋಕಸಭಾ ಚುನಾವಣೆ ನಮಗೆ ಸೆಮಿ ಫೈನಲ್ ಇದ್ದಂತೆ. ಆರು ತಿಂಗಳ ಬಳಿಕ ಫೈನಲ್ ನಡೆಯಲಿದೆ. ನಾವು ಫೈನಲ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇವೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ಗೋಕಾಕ್ ಕ್ಷೇತ್ರದ ಶಾಸಕರು ನಮ್ಮ ಜೊತೆ ಇಲ್ಲ. ಶನಿವಾರ ಅವರು ಬೆಂಬಲಿಗರ ಸಭೆ ನಡೆಸಿ ಬಿಜೆಪಿ ಬೆಂಬಲಿಸುವಂತೆ ಸೂಚಿಸಿದ್ದಾರೆ. ಕಾಂಗ್ರೆಸ್ ಬೆಂಬಲಿಸಿ ಎಂದು ನಾವು ಅವರನ್ನು ಪುನಃ ಕೇಳುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಜಾರಕಿಹೊಳಿ ಕುಟುಂಬದ ಮತ್ತೊಬ್ಬರು ರಾಜಕೀಯಕ್ಕೆ ಎಂಟ್ರಿಯಾಗುವ ಸುಳಿವನ್ನು ಸತೀಶ್ ಜಾರಕಿಹೊಳಿ ನೀಡಿದ್ದಾರೆ. ‘ಗೋಕಾಕ್ ಕ್ಷೇತ್ರವನ್ನು ಇನ್ನು ಮುಂದೆ ಲಖನ್ ಜಾರಕಿಹೊಳಿ ನೋಡಿಕೊಳ್ಳಲಿದ್ದಾರೆ’ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಬೆಂಬಲಿಗರಲ್ಲಿ ಕೆಲವೊಂದು ಗೊಂದಲಗಳಿವೆ. ಆದರೆ, ನಾವು ಪಕ್ಷಕ್ಕೆ ಯಾವುದೇ ನಷ್ಟವಾಗಲು ಬಿಡುವುದಿಲ್ಲ  ಎಂದು ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ಸಚಿವ ಸಂಪುಟದಿಂದ ಕೈ ಬಿಟ್ಟ ಬಳಿಕ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಚಟುವಟಿಕೆಗಳಿಂದ ದೂರವಾಗಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರದಲ್ಲಿಯೂ ಅವರು ಕಾಣಿಸಿಕೊಂಡಿಲ್ಲ. (ಎನ್.ಬಿ)

Leave a Reply

comments

Related Articles

error: