ಮೈಸೂರು

ರಂಗ ಉತ್ಸವ-2017 ‘ಪ್ರೋಮೊ ಹಾಗೂ ಭಿತ್ತಿಪತ್ರ’ ಬಿಡುಗಡೆ

ಮೈಸೂರಿನ ನಿರಂತರ ಫೌಂಡೇಶನ್‍ ನಿಂದ ‘ನಿರಂತರ ರಂಗ ಉತ್ಸವ’ವನ್ನು ಫೆ.7ರಿಂದ 11ರವರೆಗೆ ಕಲಾಮಂದಿರದ ವನರಂಗದಲ್ಲಿ ಆಯೋಜಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಇಂದು ಪತ್ರಕರ್ತರ ಭವನದಲ್ಲಿ ಭಿತ್ತಿಪತ್ರ ಹಾಗೂ ಪ್ರೋಮೊವನ್ನು ಬಿಡುಗಡೆ ಮಾಡಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯುವ ರಂಗ ಉತ್ಸವವನ್ನು ಫೆ.7ರ ಸಂಜೆ 6ಕ್ಕೆ  ಹಿರಿಯ ರಂಗನಿರ್ದೇಶಕ ಚಿದಂಬರ ರಾವ್ ಜಂಭೆ ಉದ್ಘಾಟಿಸುವರು, ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ  ಹಾಗೂ ನಿರಂತರ ಫೌಂಡೇಶನ್‍ನ ಪ್ರಸಾದ್ ಕುಂದೂರು ಸಮಾರಂಭದಲ್ಲಿ ಭಾಗಿಯಾಗುವರು ಎಂದು ರಂಗ ನಿರ್ದೇಶಕ ಸುಗುಣ ಎಂ.ಎಂ. ತಿಳಿಸಿ ರಂಗ ಉತ್ಸವದಲ್ಲಿ 5 ವಿವಿಧ ಜಿಲ್ಲೆಗಳ ರಂಗ ತಂಡಗಳು ಪಾಲ್ಗೊಳ್ಳಲಿವೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ ಮಾತನಾಡಿ ನಿರಂತರ ರಂಗ ತಂಡವೂ ಅತ್ಯಂತ ಉತ್ಸಾಹಿ ರಂಗಪ್ರೇಮಿಗಳನ್ನೊಳಗೊಂಡ ಕುಟುಂಬವಾಗಿದ್ದು, ತಂಡದಿಂದ ಸಾಮಾಜಿಕ ಸಮಾನತೆ, ಬದಲಾವಣೆ ದೃಷ್ಟಿಯಿಂದ ಹಲವಾರು ವಿನೂತನ ಪ್ರಯೋಗಗಳನ್ನು ನಡೆಸಿ ಮೈಸೂರಿಗರ ಮೆಚ್ಚುಗೆ ಗಳಿಸಿದೆ ಎಂದರು. ವಿನೂತನವಾಗಿ ಆಯೋಜಿಸುವ ರಂಗ ಉತ್ಸವವನ್ನು ಮೈಸೂರಿಗರು ಉತ್ಸುಕವಾಗಿ ಎದುರು ನೋಡುವರು ಎಂದರು.

ನಾಟಕಗಳು : ಫೆ.7 ಧಾರವಾಡದ ಆಟ ಮಾಟ ತಂಡದಿಂದ ಬಾರಿಗಿಡ, ಫೆ.8. ರಂಗಾಯಣ ರೆಪರ್ಟರಿ ಕಲಾವಿದರಿಂದ ಚಕಾವ್ ಟು ಶಾಂಪೇನ್. ಫೆ.9 ಬೆಂಗಳೂರಿನ ಸಮಷ್ಟಿ ತಂಡದಿಂದ ನೀರು ಕುಡಿಸಿ ನೀರೆಯರು, ಫೆ.10ರಂದು ಕಿನ್ನರ ಮೇಳ, ತುಮರಿ ಅಭಿನಯದ ಕೋರಿಯೋಲೇಸನ್ ನಾಟಕಗಳು ಪ್ರತಿ ದಿನ ಸಂಜೆ 7ರಿಂದ ಪ್ರದರ್ಶನಗೊಳ್ಳಲಿವೆ. ಫೆ.11ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮಧ್ಯಪ್ರದೇಶದ ಕಾಲೂರಾಂ ಬಮಾನಿಯಾ ಮತ್ತು ತಂಡದಿಂದ ಕಬೀರ್ ಗಾಯನವಿರುವುದು ಎಂದು ತಿಳಿಸಿದರು.

ಹಿರಿಯ ಪತ್ರಿಕಾ ಛಾಯಾಗ್ರಾಹಕ ನೇತ್ರರಾಜು ಪ್ರೋಮೊ ಬಿಡುಗಡೆಗೊಳಿಸಿದರು, ಶ್ರೀನಿವಾಸ ಪಾಲಹಳ್ಳಿ, ದೀಪಕ್ ಮೈಸೂರು ಉಪಸ್ಥಿತರಿದ್ದರು.

Leave a Reply

comments

Related Articles

error: