ಮೈಸೂರು

ಏ.26 : ಸುತ್ತೂರಿನಲ್ಲಿ ಕೆ.ಎಂ. ತಮ್ಮಯ್ಯನವರ ನೂರನೆಯ ಜನ್ಮದಿನೋತ್ಸವ

ಮೈಸೂರು,ಏ.24:- ಸುತ್ತೂರು ಶ್ರೀಕ್ಷೇತ್ರದಲ್ಲಿ ಶ್ರೀಮಠದ ಹಿರಿಯರ ಮನೆಯಲ್ಲಿ ನಿವಾಸಿಯಾಗಿರುವ  ಕೆ.ಎಂ.ತಮ್ಮಯ್ಯನವರು  ಇದೇ 18ರಂದು ನೂರನೇ ವಸಂತಕ್ಕೆ ಕಾಲಿರಿಸಿದ್ದಾರೆ. ಪರಮಪೂಜ್ಯ ಜಗದ್ಗುರು  ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ, ವಿಜಯಪುರ ಜ್ಞಾನಯೋಗಾಶ್ರಮದ  ಸಿದ್ಧೇಶ್ವರ ಮಹಾಸ್ವಾಮಿಗಳರ ದಿವ್ಯ ಸಮ್ಮುಖದಲ್ಲಿ ಹಾಗೂ ಮೈಸೂರು ಮತ್ತು ಸುತ್ತೂರಿನ ಹಿರಿಯರ ಮನೆಗಳ ನಿವಾಸಿಗಳ ಉಪಸ್ಥಿತಿಯಲ್ಲಿ ಅವರ ನೂರನೇ ಹುಟ್ಟುಹಬ್ಬವನ್ನು ಏ.26ರಂದು  ಹಿರಿಯರ ಮನೆಯಲ್ಲಿ ಆಚರಿಸಲಾಗುವುದು.

ಕೆ.ಎಂ. ತಮ್ಮಯ್ಯನವರು ಮೂಲತಃ ಮೈಸೂರಿನವರು. ರಾಜಕೀಯ ಕ್ಷೇತ್ರದಲ್ಲಿದ್ದು, ದಶಕಗಳ ಕಾಲ ಸಮಾಜಸೇವೆಯನ್ನು ಮಾಡಿದ್ದಾರೆ. 100ನೇ ವಯಸ್ಸಿನಲ್ಲಿಯೂ ದೈಹಿಕವಾಗಿ ಸದೃಢರಾಗಿದ್ದಾರೆ. ದಿನಪತ್ರಿಕೆಗಳನ್ನು ಓದುವ ಹಾಗೂ ಟಿ.ವಿ.ನೋಡುವ ಹವ್ಯಾಸವನ್ನು ಹೊಂದಿರುತ್ತಾರೆ. ಇವರ ಪುತ್ರ  ದಯಾನಂದ್ ಪಾಟೀಲ್‍ರವರು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯವಸ್ತು ಸಂಗ್ರಹಾಲಯದ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮೊಮ್ಮಕ್ಕಳು ಅಮೆರಿಕಾದಲ್ಲಿ ನೆಲೆಸಿದ್ದಾರೆ.

ಸುತ್ತೂರು ಶ್ರೀಮಠವು ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದ ಮುಖಾಂತರ ಸಮಾಜದ ಎಲ್ಲಾ ವರ್ಗದ ಜನರಿಗೆ ಸೇವೆ ಒದಗಿಸುತ್ತಿದೆ. ಬಾಳ ಇರುಳಿಗೆ ನೆಮ್ಮದಿಯ ತಾಣವಾಗಿ ಸುತ್ತೂರು ಶ್ರೀಕ್ಷೇತ್ರದಲ್ಲಿ 2002ರಲ್ಲಿ ಹಿರಿಯರ ಮನೆಯನ್ನು ಪ್ರಾರಂಭಿಸಲಾಯಿತು.  35 ಮಂದಿ ನಿವಾಸಿಗಳಿದ್ದಾರೆ. ವಾಸ್ತವ್ಯಕ್ಕೆ ಸುಸಜ್ಜಿತ ವ್ಯವಸ್ಥೆ, ಆರೋಗ್ಯಕರ ಊಟೋಪಚಾರ, ಗ್ರಂಥಾಲಯ ಹಾಗೂ ಮನೋರಂಜನ ಚಟುವಟಿಕೆಗಳ ಜೊತೆಗೆ ಸಕಾಲಿಕ ವೈದ್ಯಕೀಯ ಸೇವೆ ವ್ಯವಸ್ಥೆ ಇರುತ್ತದೆ. ಆರ್ಥಿಕವಾಗಿ ಅನಾನುಕೂಲವಿರುವವರಿಗೆ ಪ್ರತ್ಯೇಕವಾಗಿ ಶ್ರೀಕ್ಷೇತ್ರದ ಉಚಿತ ಹಿರಿಯರಮನೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಇದಲ್ಲದೆ ಮೈಸೂರಿನ ಅರವಿಂದ ನಗರದಲ್ಲಿರುವ ಹಿರಿಯರ ಮನೆಯಲ್ಲಿ 25 ಮಂದಿ ನಿವಾಸಿಗಳಿದ್ದಾರೆ. ಹಾಗೆಯೇ ಬೆಂಗಳೂರು ಜಿಲ್ಲೆ ತಾವರೆಕೆರೆ ಹೋಬಳಿಯ ದೊಡ್ಡ ಆಲದ ಮರದ ಹತ್ತಿರ ಕೇತೋಹಳ್ಳಿಯಲ್ಲಿಯೂ ಹಿರಿಯರ ಮನೆಯನ್ನು ಇತ್ತೀಚಿಗೆ ಪ್ರಾರಂಭಿಸಲಾಗಿದೆ. (ಎಸ್.ಎಚ್)

Leave a Reply

comments

Related Articles

error: