ಮೈಸೂರು

ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿ : ಪ್ರೊ.ಕೆ.ಜೆ.ರಾವ್

ಯುವರಾಜ ಕಾಲೇಜಿನ ಆರನೇ ಪದವಿ ಪ್ರದಾನ ಸಮಾರಂಭ

ಮೈಸೂರು,ಏ.25:- ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ರಸಾಯನ ಶಾಸ್ತ್ರ ಘಟಕದ ಗೌರವ ಪ್ರಾಧ್ಯಾಪಕ ಪ್ರೊ.ಕೆ.ಜೆ.ರಾವ್ ತಿಳಿಸಿದರು.

ಅವರಿಂದು   ಯುವರಾಜ ಕಾಲೇಜಿನ ಅಮೃತಮಹೋತ್ಸವ ಸಭಾಂಗಣದಲ್ಲಿ ಏರ್ಪಡಿಸಲಾದ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನ ಆರನೇ ಪದವಿ ಪ್ರದಾನ ಸಮಾರಂಭದಲ್ಲಿ ಪದವಿ ಪ್ರದಾನಿಸಿ ಮಾತನಾಡಿದರು. ಯುವರಾಜ ಕಾಲೇಜು ಕರ್ನಾಟಕ ರಾಜ್ಯದ ಅತ್ಯಂತ ಹಳೆಯ ವಿಜ್ಞಾನ ಕಾಲೇಜು. ಇಲ್ಲಿ ಪದವಿ ಪ್ರದಾನ ಮಾಡಲು ಬಂದಿರುವುದು ನನಗೆ ಖುಷಿ ನೀಡಿದೆ ಎಂದರು. 1928ರಲ್ಲಿ ಮೈಸೂರಿನ ಶ್ರೀಕೃಷ್ಣರಾಜ ಒಡೆಯರ್ ಕಾಲೇಜನ್ನು ನಿರ್ಮಿಸಿದರು. ಪ್ರತಿವರ್ಷವೂ ಕಾಲೇಜು ಪ್ರಾಬಲ್ಯವನ್ನು ಮೆರೆಯುತ್ತಿದೆ. ಕಾಲೇಜು ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿದ್ದು, ನ್ಯಾಕ್ ನಿಂದ ಗುರುತಿಸಿಕೊಂಡು ಕಾಲೇಜು ಉನ್ನತ ಮಟ್ಟದಲ್ಲಿದೆ. ಸ್ಥಾನಮಾನವನ್ನು ಸಾಧಿಸುವಲ್ಲಿ ಕಾಲೇಜಿನ ಬೋಧನಾ ವಿಭಾಗ ಕೂಡ ಸತತ ಪ್ರಯತ್ನಗಳನ್ನು ನಡೆಸುತ್ತಿದೆ ಎಂದರು.

ವಿಜ್ಞಾನ ಪಿ.ಹೆಚ್ ಡಿಗಾಗಿ ನೋಂದಣಿಯಾಗಿರುವವರ ಸಂಖ್ಯೆ ಅತಿ ದೊಡ್ಡದಿದೆ.  2017ರಲ್ಲಿ ಒಟ್ಟು 34,400ಪಿಹೆಚ್ ಡಿ ನೀಡಲಾಗಿದ್ದು, ಪಿಹೆಚ್ ಡಿ ಡಿಗ್ರಿ 8880ವಿದ್ಯಾರ್ಥಿಗಳಿಗೆ ನೀಡಲಾಗಿದೆ. ವಿಜ್ಞಾನದಲ್ಲಿ ಕರ್ನಾಟಕದಲ್ಲಿ ಕೇವಲ 3663 ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ಪಿಹೆಚ್.ಡಿ ಪದವಿಯನ್ನು 2017ರಲ್ಲಿ ನೀಡಲಾಗಿದೆ ಎಂದು ತಿಳಿಸಿದರು.

ನೀವು ಪದವಿ ಪ್ರಮಾಣ ಪತ್ರದೊಂದಿಗೆ ಹೊರಗೆ ಕಾಲಿಡುತ್ತಿದ್ದೀರಿ. ಈಗ ಹಲವು ಆಯ್ಕೆ ನಿಮ್ಮ ಮುಂದಿದೆ. ವೃತ್ತಿಪರ ಸಂಶೋಧಕರಾಗಲು ನಿಮ್ಮ ಶಿಕ್ಷಣವನ್ನು ಮುಂದುವರಿಸುತ್ತೀರಾ? ವೈಜ್ಞಾನಿಕ ಕಾರ್ಮಿಕರ ರೀತಿಯ ತಯಾರಿಕಾ ಕಂಪನಿಯಲ್ಲಿ ಸೇರಿಕೊಳ್ಳುತ್ತೀರಾ? ಶಿಕ್ಷಕರಾಗುತ್ತೀರಾ? ಉದ್ಯಮಿಗಳಾಗುತ್ತೀರಾ? ಸ್ವತಂತ್ರ ಉದ್ಯೋಗಿಗಳು, ವಿಜ್ಞಾನದ ಸಲಹೆಗಾರರಾಗುತ್ತೀರಾ ಆಯ್ಕೆ ನಿಮಗೆ ಬಿಟ್ಟದ್ದು. ಕೇವಲ ಪದವಿ ಪಡೆದ ಮಾತ್ರಕ್ಕೆ ಉದ್ಯೋಗ ದೊರೆಯಲಾರದು. ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ವಿಜ್ಞಾನ ನಮಗೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ನೀಡಿದೆ. ವಿಜ್ಞಾನವಿಲ್ಲದ ಜೀವನವನ್ನು ಕಲ್ಪಿಸುವುದೇ ಕಷ್ಟ. ಶೋಧನೆಯು ಜ್ಞಾನವನ್ನು ಒಳಗೊಂಡಿದೆ. ವಿಜ್ಞಾನ ಶೋಧನಾತ್ಮಕವಾಗಿದೆ. ನೀವು ಕಲಿತ ವಿದ್ಯೆಯನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ಸಮಾಜಕ್ಕೂ ಕೂಡ ಕೊಡುಗೆಗಳನ್ನು ನೀಡಿ. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿ ಎಂದರು. ಮಾನವೀಯತೆಯನ್ನು ಬೆಳೆಸಿಕೊಂಡು ಸನ್ಮಾರ್ಗದ ದಾರಿಯಲ್ಲಿ ನಡೆದಾಗ ಯಶಸ್ಸು ನಿಮ್ಮದಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 12ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಯಿತು. ಈ ಸಂದರ್ಭ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಹೆಚ್.ಬಿ.ಮಹೇಶ್, ಪ್ರಾಂಶುಪಾಲರಾದ ಡಾ.ಎಂ.ರುದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: