ಮೈಸೂರು

ರಸ್ತೆ ದುರವಸ್ಥೆ ಸರಿಪಡಿಸಲು ಸರ್ಕಾರದ ನಿರ್ಲಕ್ಷ್ಯ: ನೂತನ ಲೋಕಾಯುಕ್ತರಿಗೆ ದೂರು

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಕುಂದನಹಳ್ಳಿ ಗ್ರಾಮದ ಮುಖ್ಯ ರಸ್ತೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿ ಮೂರು ತಿಂಗಳಾದರೂ ಕಾಮಗಾರಿ ಆರಂಭವಾಗದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕುಂದನಹಳ್ಳಿಯ ಸಮಾಜ ಸೇವಕ ಶಿವಣ್ಣ ಅವರು ಈ ಕುರಿತು ನೂತನ ಲೋಕಾಯುಕ್ತರಿಗೆ ಪತ್ರ ಬರೆದಿದ್ದಾರೆ.

ನೂತನ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ನ್ಯಾ.ಪಿ. ವಿಶ್ವನಾಥ ಶೆಟ್ಟಿಯವರಿಗೆ ಸಮಸ್ಯೆಗೆ ಸಂಬಂಧಪಟ್ಟು ಪತ್ರ ಬರೆಯಲಾದೆ. ಗ್ರಾಮದ ಬಿ.ಎಂ ರಸ್ತೆಯಿಂದ ಅಂಗನವಾಡಿಯವರಿಗೆ 500 ಮೀಟರ್ ಸಿಮೆಂಟ್ ಕಾಂಕ್ರಿಟ್ ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ, ಮತ್ತು ಡಾಂಬರೀಕರಣ ಕಾಮಗಾರಿಗೆ ಅಂದಾಜು 22.05 ಲಕ್ಷ ರೂ. ವೆಚ್ಚದಲ್ಲಿ ಅನುಮೋದನೆ ನೀಡಿ ಅನುದಾನ ಬಿಡುಗಡೆಗಾಗಿ ಮೈಸೂರು ಜಿ.ಪಂ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಸರ್ಕಾರದ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಈಗಾಗಲೆ ಎರಡು ಮನವಿ ಪತ್ರ ಸಲ್ಲಿಸಿದ್ದರೂ ಸರ್ಕಾರದಿಂದ ಕಾರ್ಯದೇಶ ಬಂದಿಲ್ಲ ಎಂದು ಶಿವಣ್ಣ ಆರೋಪಿಸಿದ್ದಾರೆ.

ಕುಂದನಹಳ್ಳಿ ಗ್ರಾಮದ ಬಿ.ಎಂ. ರಸ್ತೆಯಿಂದ ಅಂಗನವಾಡಿಯವರಿಗೆ ರಸ್ತೆ ಅವ್ಯವಸ್ಥೆಯಿಂದ ಮಳೆಗಾಲದಲ್ಲಿ ಶಾಲೆಗೆ ಮತ್ತು ಅಂಗನವಾಡಿಗೆ ತೆರಳುವ ಮಕ್ಕಳು ಕೆಸರನ್ನು ಸಮವಸ್ತ್ರಗಳ ಮೇಲೆ ಮೈದುಂಬಿಸಿಕೊಂಡು ಹೋದರೆ, ಅಂಗನವಾಡಿಗೆ ತೆರಳುವ ಮುಗ್ಧ ಮಕ್ಕಳು ಕೆಸರಿನಲ್ಲಿ ಬಿದ್ದು ಅಳುತಿರುವಾಗ ಸಾರ್ವಜನಿಕರು ಮಕ್ಕಳನ್ನು ಮೇಲಕ್ಕೆ ಎತ್ತಿರುವುದು ಸಾಕಷ್ಟು ಬಾರಿ ಕಂಡುಬಂದಿದೆ.

ಇದರಿಂದಾಗಿ ರಸ್ತೆ ಅಭಿವೃದ್ಧಿಪಡಿಸುವಂತೆ ಪತ್ರ ಬರೆದಿದ್ದ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯದಿಂದ ಜು.೧೧ ಹಾಗೂ ರಾಷ್ಟ್ರಪತಿ ಕಾರ್ಯಾಲಯದಿಂದ ಸೆ.08 ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಆದೇಶ ಬಂದಿದ್ದರೂ ಈವರೆಗೂ ಕುಂದನಹಳ್ಳಿಯ ರಸ್ತೆ ಅಭಿವೃದ್ಧಿಯ ಅದೃಷ್ಟ ಕಂಡುಬಂದಿಲ್ಲ.

ಕಳೆದ ವರ್ಷ ಜಿ.ಪಂ. ಸಿಇಒ ಮತ್ತು ತಾಂತ್ರಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರೂ ಪ್ರಯೋಜನವಾಗಿಲ್ಲ. ಪ್ರಧಾನಿ ಕಾರ್ಯಲಯವು ಆದೇಶಿಸಿ ಒಂದು ವರ್ಷ ಕಳೆದಿದೆ. ಇನ್ನು ರಾಷ್ಟ್ರಪತಿ ಕಚೇರಿ ಕೂಡ ಕುಂದನಹಳ್ಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಸೂಚಿಸಿದ್ದರೂ ಇಲ್ಲಿನ ಅಧಿಕಾರಿಗಳು ಗಮನ ನೀಡುತ್ತಿಲ್ಲ ಎಂದು ಸಮಾಜ ಸೇವಕ ಕುಂದನಹಳ್ಳಿ ಶಿವಣ್ಣ ತಿಳಿಸಿದ್ದಾರೆ.

ಜನ ಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಮಾತ್ರ ಇಲ್ಲಸಲ್ಲದ ಆಶ್ವಾಸನೆ ನೀಡಿ ಹೋಗುತ್ತಾರೆಯೇ ಹೊರತು, ಗ್ರಾಮದ ಅಭಿವೃದ್ಧಿ ಕೆಲಸದ ಬಗ್ಗೆ ಯಾರೂ ತಲೆಕಡೆಸಿಕೊಳ್ಳುವುದಿಲ್ಲ ಎಂದು ದೂರಿದ್ದಾರೆ.

ವರದಿ: ಬಿ.ಆರ್. ರಾಜೇಶ್

Leave a Reply

comments

Related Articles

error: