ಮೈಸೂರು

ವರ್ಣರಂಜಿತವಾಗಿ ಮೂಡಿಬಂದ ಆರ್ಟಿಕ್ಯುಲೇಟ್ 35ನೇ ನೃತ್ಯೋತ್ಸವ

ಮೈಸೂರು, ಏ.26:- 35 ಆರ್ಟಿಕ್ಯುಲೇಟ್ ನೃತ್ಯೋತ್ಸವವು ನಗರದ ಕುವೆಂಪುನಗರದಲ್ಲಿರುವ ವೀಣೆಶೇಷಣ್ಣ ಭವನದಲ್ಲಿ ಇತ್ತೀಚೆಗೆ ವರ್ಣರಂಜಿತವಾಗಿ ನಡೆಯಿತು.

ಈ ನೃತ್ಯೋತ್ಸವ  ಭರತನಾಟ್ಯ, ಕಥಕ್ ಹಾಗೂ ಒಡಿಸ್ಸಿ ಶೈಲಿಯ ಶಾಸ್ತ್ರೀಯ ನೃತ್ಯ ಪ್ರದರ್ಶನದ ಮೆರುಗನ್ನು ಅನಾವರಣಗೊಳಿಸಿ, ದಕ್ಷಿಣ ಭಾರತ, ಉತ್ತರ ಭಾರತ ಮತ್ತು ಈಶಾನ್ಯ ಭಾಗದ ಸಂಗಮವೆನಿಸಿತು.

ಮೈಸೂರು ಬಿ.ನಾಗರಾಜ್‍ರವರ ಆರ್ಟಿಕ್ಯುಲೇಟ್ ಸ್ಟುಡಿಯೋನಲ್ಲಿ ಮೈಸೂರು ಬಿ.ನಾಗರಾಜ್ ಶಿಷ್ಯತ್ವದಲ್ಲಿ ನೃತ್ಯಾಭ್ಯಾಸದಲ್ಲಿ ತೊಡಗಿರುವ ಬೆಂಗಳೂರಿನ  ಯಶಸ್ವಿನಿ ಎಸ್. ಅವರು ಕಥಕ್ ನೃತ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೃದಂಗವನ್ನು ಬಾರಿಸುತ್ತಾ ತನ್ನ  ಸಂಗಡಿಗರೊಂದಿಗೆ ‘ಭಜನ ಮೃದಂಗ’ವೆಂಬ ನೃತ್ಯದಲ್ಲಿ ಶಿವ, ಮೈಮರೆತು ನಟಿಸುವ ಭಕ್ತಿಭಾವಗಳ ರಸಾಗ್ರಹಣ ಅನಾವರಣಗೊಳಿಸಿದರು.  ಎರಡನೇ ಪ್ರದರ್ಶನದಲ್ಲಿ  ಯಶಸ್ವಿನಿಯವರು ಮಹಾರಾಜ್ ಬಿಂದಲಿನ್‍ ಅವರ ಎರಡು ಸಾಹಿತ್ಯಕ ಕೃತಿಗಳಿಗೆ ನರ್ತಿಸಿದರು. ಇದು ಒಂದು ಠುಮ್ರಿ ಎಂದು ಕರೆಯಲ್ಪಟ್ಟು, ಲಕ್ನೋ ಘರಾನಾ ಶೈಲಿಯಲ್ಲಿತ್ತು. ವಿಬ್ರಲಬ್ದ ನಾಯಿಕ ಮತ್ತು ಖಂಡಿತ ನಾಯಿಕ ಇವುಗಳ ಸಮ್ಮಿಶ್ರಣವನ್ನು ಕಾಣಬಹುದಿತ್ತು. ಅವರು ಆರಿಸಿದ್ದ ಠುಮ್ರಿ ‘ಅವಥ ಶ್ಯಾಮ’ ಹಾಗೂ ‘ಕಹೇತೋ ಮೇರೆ ಘರ್ ಆಯೇ ಹೋ’ ಆಗಿತ್ತು.  ಅಂತಿಮ ಕಥಕ್ ಶೈಲಿಯ ನೃತ್ಯ ‘ಪ್ರಬಂಧ’ವಾಗಿತ್ತು. ಇದು ಸಂಗೀತದ ವಿವಿಧ ರೂಪಗಳನ್ನು ಅನಾವರಣಗೊಳಿಸಿತು. ಕಥಕ್ ನೃತ್ಯ ಶೈಲಿಯ ಖ್ಯಾತ ಕಲಾವಿದೆ ಮಾಯಾರಾವ್ ಇದನ್ನು ನೃತ್ಯರೂಪಕ್ಕೆ ಅಳವಡಿಸಿದ್ದಾರೆ.

ದೇವಕಿ ನರಸಿಂಹನ್‍ರವರ ಶಿಷ್ಯೆಯರಾದ ಹಾಗೂ ಅವಳಿ ಸಹೋದರಿಯರಾದ  ಅರ್ಚನ ಮತ್ತು  ಚೇತನ  ಭರತನಾಟ್ಯ ಪ್ರದರ್ಶಿಸಿದರು.  ಅರುಣಾಚಲ ಕವಿ ವಿರಚಿತ ತಮಿಳು ಕೃತಿಯೊಂದಿಗೆ ಪ್ರಾರಂಭಿಸಿ, ಮುತ್ತಯ್ಯ ಭಾಗವತರ ವಿರಚಿತ ಶಕ್ತಿದೇವತೆ ದುಷ್ಟಶಕ್ತಿಯನ್ನು ನಿಗ್ರಹಿಸಿ, ಶಾಂತಿಯ ಸ್ಥಾಪನೆ ಮಾಡುವ ನೃತ್ಯದೊಂದಿಗೆ   ಮುಕ್ತಾಯಗೊಳಿಸಿದರು.

ಬೆಂಗಳೂರಿನ ಅದ್ಯಷ ಪ್ರತಿಷ್ಠಾನದ ಮುಖ್ಯಸ್ಥೆ   ಸರಿತಾ ಮಿಶ್ರಾ  ಶಿಷ್ಯತ್ವ ಪಡೆದಿರುವ ಹಾಗೂ ಒಡಿಸ್ಸಿ ಶೈಲಿಯ ನೃತ್ಯ ಶೈಲಿಯ ಖ್ಯಾತ ಕಲಾವಿದೆ   ರಾಧಿಕಾ ಮಕಾರಾಮ್ ತಮ್ಮ ನೃತ್ಯ ಪ್ರದರ್ಶನದಲ್ಲಿ ಪಲ್ಲವಿಯನ್ನು ಪ್ರಸ್ತುತಪಡಿಸಿದರು. ಇದು ಸಾವೇರಿ ರಾಗದಲ್ಲಿದ್ದು,   ಒಡಿಸ್ಸಿ ಶೈಲಿಯ ನೃತ್ಯದ ಭಾವ, ಭಂಗಿಗಳನ್ನು ಹಾಗೂ ಚಲನಶೀಲತೆಯನ್ನು   ಅನಾವರಣಗೊಳಿಸಿದರು. ‘ಪಶ್ಯಥಿ ದಿಷಿ ದಿಷಿ’ ಎಂಬ ಹಾಡಿಗೆ  ನರ್ತಿಸಿದರು.

ಮುಂಬಯಿಯ ನಳಂದ ನೃತ್ಯಕಲಾ ಮಹಾವಿದ್ಯಾಪೀಠದ ಕಲಾವಿದೆ ಡಾ.ಕ್ಷಿತಿಜ ಬಾರ್ವೆ ಭರತನಾಟ್ಯವನ್ನು ಸಾದರಪಡಿಸಿದರು.   ಒಟ್ಟಿನಲ್ಲಿ ಇದೊಂದು ಅತ್ಯಂತ ಯಶಸ್ವಿಯಾದ ಹಾಗೂ ಮನಮೋಹಕ ನೃತ್ಯೋತ್ಸವವಾಗಿ ಪರಿಣಮಿಸಿ, ಸಹೃದಯರ ಮೆಚ್ಚುಗೆ ಗಳಿಸಿತು ಎಂದರೆ ತಪ್ಪಾಗಲಾರದು. (ಎಸ್.ಎಚ್)

Leave a Reply

comments

Related Articles

error: