ಮೈಸೂರು

ದಸರಾದಲ್ಲಿ ಭಾಗವಹಿಸುತ್ತಿದ್ದ ಆನೆ ‘ದ್ರೋಣ’ ಸಾವಿಗೆ ‘ಆಂತ್ರಾಕ್ಸ್’ ರೋಗ ಕಾರಣವಲ್ಲ : ನಿಟ್ಟುಸಿರು ಬಿಟ್ಟ ಅಧಿಕಾರಿಗಳು

ಮೈಸೂರು,ಏ.27:- ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ ಆನೆ  ‘ದ್ರೋಣ’ ಸಾವಿಗೆ  ‘ಆಂತ್ರಾಕ್ಸ್’ ರೋಗ ಕಾರಣವಲ್ಲ ಎಂಬುದು ಅರಣ್ಯ ಅಧಿಕಾರಿಗಳನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.

37 ವರ್ಷದ ಸಾಕಾನೆ ದ್ರೋಣ, ನಿನ್ನೆ ಸಂಜೆ  ಮೃತಪಟ್ಟಿತ್ತು. ಹೃದಯ ಸ್ತಂಭನದಿಂದ ದ್ರೋಣ ಮೃತಪಟ್ಟಿರುವ ಬಗ್ಗೆ ಪಶು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ, ಆನೆಯ ಅಕಾಲಿಕ ನಿಧನಕ್ಕೆ ಮತ್ಯಾವುದಾದರೂ ಕಾರಣವಿದೆಯೇ ಎಂಬ ಅನುಮಾನ ಕಾಡಿತ್ತು. ಆದ್ದರಿಂದ ಅರಣ್ಯಾಧಿಕಾರಿಗಳು ಮೃತ ಆನೆಯ ಕೆಲ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಅಲ್ಲಿಂದ ವರದಿ ಬಂದ ಬಳಿಕವಷ್ಟೇ ಆನೆಯ ಮರಣೋತ್ತರ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದರು.

ಇದೀಗ ಪ್ರಯೋಗಾಲಯದಿಂದ ವರದಿ ಬಂದಿದ್ದು,  ಆನೆಯ ಸಾವಿಗೆ ಆಂತ್ರಾಕ್ಸ್ ಕಾರಣವಲ್ಲ ಎಂಬುದು ದೃಢಪಟ್ಟಿದೆ. ಇದು ಅಧಿಕಾರಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.  ಕಳೆದ ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ ಆಂತ್ರಾಕ್ಸ್ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಪರಿಣಾಮ ಹಲವಾರು ಪ್ರಾಣಿಗಳು ಮೃತಪಟ್ಟಿದ್ದವು. ಇದು ಅರಣ್ಯದಲ್ಲಿನ ಆನೆಗಳ ಪ್ರಾಣಕ್ಕೂ ಕುತ್ತು ತಂದಿತ್ತು. ಈ ಹಿನ್ನೆಲೆಯಲ್ಲಿ ದ್ರೋಣನ ದಿಢೀರ್ ಸಾವು, ಅರಣ್ಯಾಧಿಕಾರಿಗಳ ಆತಂಕಕ್ಕೆ ಕಾರಣವಾಗಿತ್ತು. ಆಂತ್ರಾಕ್ಸ್ ಮತ್ತೆ ಕಾಣಿಸಿಕೊಂಡಿದೆಯೇನೋ ಎಂಬ ಅನುಮಾನ ಮೂಡಿತ್ತು. ಆದ್ದರಿಂದಲೇ ಮೃತ ಆನೆಯ ಶರೀರವನ್ನು ಕತ್ತರಿಸಿ ಮರಣೋತ್ತರ ಪರೀಕ್ಷೆ ಮಾಡದೆ, ಮೊದಲು ಪ್ರಯೋಗಾಲಯಕ್ಕೆ ಸ್ಯಾಂಪಲ್ ಕಳುಹಿಸಿ ವರದಿ ತರಿಸಿಕೊಂಡಿದ್ದರು. ಇದೀಗ, ವರದಿಯಲ್ಲಿ ದ್ರೋಣನ ಸಾವಿಗೆ ಆಂತ್ರಾಕ್ಸ್ ಕಾರಣವಲ್ಲ ಎಂಬ ಅಂಶ ದೃಢಪಟ್ಟಿರುವುದು ಅಧಿಕಾರಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ. ಇಂದು ಮೃತ ಆನೆ ದ್ರೋಣನ ಮರಣೋತ್ತರ ಪರೀಕ್ಷೆ  ನಡೆಯಲಿದೆ. ಇದಕ್ಕಾಗಿ ಮೈಸೂರಿನಿಂದ ಪಶುವೈದ್ಯಾಧಿಕಾರಿಗಳ ತಂಡ ತೆರಳಿದ್ದು, ಸಂಜೆ ವೇಳೆಗೆ ಪೋಸ್ಟ್ ಮಾರ್ಟಂ ರಿಪೋರ್ಟ್ ಲಭಿಸಲಿದೆ. ಆಗ ಆನೆ ಸಾವಿಗೆ ನಿಖರ ಕಾರಣ ತಿಳಿಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: