ಪ್ರಮುಖ ಸುದ್ದಿ

ಶಂಕಿತ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು

ರಾಜ್ಯ(ಮಡಿಕೇರಿ) ಏ.28 :- ನಿಷೇಧಿತ ನಕ್ಸಲ್ ಸಂಘಟನೆಯ ಶಂಕಿತ ನಕ್ಸಲ್ ಮುಖಂಡ, 2010ರಲ್ಲಿ ಭಾಗಮಂಡಲ ವ್ಯಾಪ್ತಿಯ ಮುಂಡ್ರೋಟುವಿನ ಮಾಂಗುಡಿಮಲೆ ಎಂಬಲ್ಲಿ ಪ್ರತ್ಯಕ್ಷನಾಗಿ ಅಲ್ಲಿನ ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿರುವ ಆರೋಪ ಎದುರಿಸುತ್ತಿರುವ ರೂಪೇಶ್‍ನನ್ನು ಬಿಗಿ ಭದ್ರತೆಯಲ್ಲಿ ಮಡಿಕೇರಿಯ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಮಡಿಕೇರಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿಡಲಾಗಿದ್ದ ರೂಪೇಶ್‍ನನ್ನು ಕೇರಳ ಭಯೋತ್ಪಾದಕ ನಿಗ್ರಹ ದಳ, ಕೇರಳ ಪೊಲೀಸರು ಮತ್ತು ಕೊಡಗು ಪೊಲೀಸ್ ಕಮಾಂಡೊಗಳು ಶಸ್ತ್ರಸಜ್ಜಿತರಾಗಿ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತಂದರು. ಪೊಲೀಸ್ ವಾಹನದಿಂದ ಕೆಳಗಿಳಿಯುತ್ತಿದ್ದಂತೆಯೇ ನಕ್ಸಲ್ ಬಾರಿ ಜಿಂದಾಬಾದ್, ಮಾವೋವಾದಿಗಳು ಅಪರಾಧಿಗಳಲ್ಲ, ಹುತಾತ್ಮ ನಕ್ಸಲರು ಅಮರವಾಗಲಿ ಎಂದು ಘೋಷಣೆಗಳನ್ನು ಕೂಗಿದ.
ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ವೀರಪ್ಪ.ವಿ.ಮಲ್ಲಾಪುರ ಅವರು ರಜೆಯಲ್ಲಿರುವುದರಿಂದ 1ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪವನೇಶ್ ಅವರ ಮುಂದೆ ಶಂಕಿತ ನಕ್ಸಲ್ ಮುಖಂಡ ರೂಪೇಶ್‍ನನ್ನು ಹಾಜರುಪಡಿಸಲಾಯಿತು. ಇಂದು ಸರಕಾರಿ ವಕೀಲರು ಹಾಜರಿಲ್ಲದಿರುವುದರಿಂದ, ಸರಕಾರಿ ವಕೀಲರಿಗೆ ಆಕ್ಷೇಪಣೆ ಸಲ್ಲಿಸಲು ದಿನಾಂಕ ನಿಗಧಿಗೊಳಿಸಿದ ನ್ಯಾಯಾಧೀಶರಾದ ಪವನೇಶ್ ಅವರು ಮುಂದಿನ ವಿಚಾರಣೆಯನ್ನು ಮೇ 22ಕ್ಕೆ ಮುಂದೂಡಿದರು.
 ಪ್ರಕರಣ ಹಿನ್ನೆಲೆ  
ಶಂಕಿತ ನಕ್ಸಲ್ ಮುಖಂಡ ರೂಪೇಶ್ ವಿರುದ್ದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ಆರೋಪಗಳಿದ್ದು, ಒಟ್ಟು 38 ಪ್ರಕರಣಗಳಿವೆ. ಈತನ ವಿರುದ್ದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳೂ ದಾಖಲಾಗಿದೆ. ಶಂಕಿತ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ 2 ಪ್ರತ್ಯೇಕ ಪ್ರಕರಣದ ವಿಚಾರಣೆಗಾಗಿ ಇದೀಗ 6ನೇ ಬಾರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಶನಿವಾರ ವಿಚಾರಣೆ ನಡೆಸಿದ ಬಳಿಕ ಆರೋಪಿ ರೂಪೇಶನನ್ನು ಕೇರಳಕ್ಕೆ ಕರೆದೊಯ್ಯಲಾಯಿತು. ನ್ಯಾಯಾಲಯದ ಹೊರಭಾಗ ನಗರ ಠಾಣಾಧಿಕಾರಿ ಷಣ್ಮುಗ ನೇತೃತ್ವದಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿತ್ತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: