ಮೈಸೂರು

ನಕಲಿ ಜಾತಿ ಪ್ರಮಾಣಪತ್ರ ಆರೋಪ ಸಾಬೀತು ಹಿನ್ನೆಲೆ : ಮನಪಾ ಸದಸ್ಯ ಗುರುವಿನಾಯಕ ಸದಸ್ಯತ್ವದಿಂದ ಅನರ್ಹಗೊಳಿಸಿ ನೀಡಿದ್ದ ತೀರ್ಪಿಗೆ ಹೈಕೋರ್ಟ್ ತಡೆ

ಮೈಸೂರು,ಏ.29:- ನಕಲಿ ಜಾತಿ ಪ್ರಮಾಣಪತ್ರ ಆರೋಪ ಸಾಬೀತಾಗಿದ್ದಕ್ಕೆ ಮೈಸೂರು ಪಾಲಿಕೆ ಸದಸ್ಯ ಗುರುವಿನಾಯಕ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ  ಅಧೀನ ನ್ಯಾಯಾಲಯ ನೀಡಿದ್ದ ತೀರ್ಪಿಗೆ ಹೈಕೋರ್ಟ್  ತಡೆ ನೀಡಿದೆ.

ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 18 ರಿಂದ  ಚುನಾಯಿತರಾಗಿದ್ದ ಬಿಜೆಪಿಯ ಗುರು ವಿನಾಯಕ ಅವರು ಪರಿವಾರ ಸಮುದಾಯಕ್ಕೆ ಸೇರಿದವರು, ಆದರೆ  ಅವರು ನಾಯಕ ಜಾತಿಯವರು ಎಂದು ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಕಾಂಗ್ರೆಸ್ ಪಕ್ಷದಿಂದ ಪರಾವಗೊಂಡಿದ್ದ ಆರ್.ರವೀಂದ್ರ ಕುಮಾರ್ ದೂರು ದಾಖಲಿಸಿದ್ದರು.  ಈ ಸಂಬಂಧ ವಿಚಾರಣೆ ನಡೆಸಿದ ಮೈಸೂರಿನ ಜಿಲ್ಲಾ ಮತ್ತು ಪ್ರಧಾನ ಸೆಷನ್ಸ್ ನ್ಯಾಯಾಲಯ, ಗುರುವಿನಾಯಕ ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆಂದು  ಆರೋಪ ಸಾಬೀತಾದ ಹಿನ್ನೆಲೆ  ಅವರನ್ನು ಅನರ್ಹಗೊಳಿಸಿ, ಎರಡನೇ ಅತಿ ಹೆಚ್ಚು ಮತಗಳಿಸಿದ್ದ ಕಾಂಗ್ರೆಸ್ ನ  ರವೀಂದ್ರಕುಮಾರ್ ಅವರನ್ನು ಸದಸ್ಯರನ್ನಾಗಿ ಘೋಷಿಸುವಂತೆ ಚುನಾವಣಾಕಾರಿಗೆ ಆದೇಶ ನೀಡಿತ್ತು. ಮೈಸೂರಿನ ಜಿಲ್ಲಾ ಮತ್ತು ಪ್ರಧಾನ ಸೆಷನ್ಸ್ ನ್ಯಾಯಾಲಯ ಆದೇಶ ಪ್ರಶ್ನಿಸಿ  ಅರ್ಜಿದಾರ ಗುರುವಿನಾಯಕ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಗುರುವಿನಾಯಕ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ  ನ್ಯಾ.ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕ ಸದಸ್ಯಪೀಠ ಅರ್ಜಿದಾರರನ್ನು ಅನರ್ಹಗೊಳಿಸಿ ಮೈಸೂರಿನ ಜಿಲ್ಲಾ ಮತ್ತು ಪ್ರಧಾನ ಸೆಷನ್ಸ್ ನ್ಯಾಯಾಲಯ ಏ.9ರಂದು ನೀಡಿದ್ದ ಆದೇಶವನ್ನು ಮುಂದಿನ ಆದೇಶದವರೆಗೆ ಜಾರಿಗೊಳಿಸದಂತೆ ಸೂಚನೆ ನೀಡಿದೆ.

ಅಲ್ಲದೆ ಅರ್ಜಿದಾರರು ಪ್ರಕರಣ ಇತ್ಯರ್ಥವಾಗುವವರೆಗೆ ಯಾವುದೇ ಪಾಲಿಕೆಯ ಸಭೆಗಳಲ್ಲಿ ಭಾಗವಹಿಸಬಾರದು. ಜತೆಗೆ ಸರಕಾರದ ಅಧಿಕೃತ ವೇತನ ಭತ್ಯೆ  ಪಡೆಯಬಾರದು ಎಂದು ಹೈಕೋರ್ಟ್ ಆದೇಶ ಹೊರಡಿಸಿ ನ್ಯಾಯಾಲಯ ವಿಚಾರಣೆಯನ್ನು ಮೇ 30ಕ್ಕೆ ಮುಂದೂಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: