ಮೈಸೂರು

ಸಾವು ಶರೀರಕ್ಕೆ, ಆತ್ಮಕ್ಕೆ ಅಲ್ಲ : ಡಾ. ತಿಮ್ಮಪ್ಪ ಹೆಗಡೆ

ಮೈಸೂರು,ಏ.29:- ಬೆಂಗಳೂರಿನ ನಾರಾಯಣ ಹೃದಯಾಲಯದ ನರರೋಗ ತಜ್ಞರಾದ ಡಾ. ತಿಮ್ಮಪ್ಪ ಹೆಗಡೆಯವರು ‘ಸಾವು ಶರೀರಕ್ಕೆ ಆತ್ಮಕ್ಕೆ ಅಲ್ಲ’ ಎಂದು ತಿಳಿಸಿದರು.

ಅವರು  ಸುತ್ತೂರು ಶ್ರೀಕ್ಷೇತ್ರದಲ್ಲಿ ಸುತ್ತೂರು ಶ್ರೀಕ್ಷೇತ್ರದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠ ಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ವೈದ್ಯರಿಗೆ ಆಯೋಜಿಸಿರುವ ವ್ಯಕ್ತಿತ್ವ ವಿಕಸನ ಶಿಬಿರದ ಉದ್ಘಾಟನೆ ನೆರವೇರಿಸಿ ಬಳಿಕ ಮಾತನಾಡಿ ಪ್ರತಿಯೊಂದು ಆಚರಣೆಯ ಹಿಂದೆ ಜೀವನದ ಮೌಲ್ಯ ಅಡಗಿದೆ. ಬದುಕೇ ಒಂದು ಹಬ್ಬ, ತಮ್ಮ ಜೀವನಕ್ಕೆ ಆಶ್ರಯವಾಗಿರುವ ಪ್ರತಿಯೊಂದು ವಸ್ತುಗಳನ್ನು ಪೂಜಿಸುವ ಮನಸ್ಸು ಅದರಲ್ಲಿದೆ. ಆತ್ಮ ಎಂಬುದು  ಎಂದಿಗೂ ನಾಶವಾಗದ್ದು, ಸತ್ಯವನ್ನು ಅರಿತು ನಾವು ಸತ್ತ ಮೇಲೆಯೂ ಆತ್ಮದೊಂದಿಗೆ ಅಮರರಾಗಿರುತ್ತೇವೆ. ಸಾವು ಎಂಬುದು ಮನುಷ್ಯನಿಗೆ ದೊರೆತ ಅಪರೂಪದ ಅವಕಾಶ, ಕಷ್ಟ ಸುಖಗಳು ಬಂದು ಹೋಗುವಂತವುಗಳು, ಅವು ಯಾವುವೂ ಶಾಶ್ವತವಲ್ಲ. ಸಾವು ಬಂದರೂ ಸಾವನ್ನು ಸಂತಸದಿಂದ ಸ್ವೀಕರಿಸಬೇಕು. ಇರುವಷ್ಟು ದಿನ ಪ್ರತಿ ಕ್ಷಣವನ್ನು ದುಖಃವಾಗಲೀ ಖುಷಿಯಾಗಲೀ ಯಾವುದಾದರೂ ಸರಿ ಅನುಭವಿಸುತ್ತಾ, ಅನುಸರಿಸುತ್ತಾ, ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಅಂದುಕೊಂಡ ಗುರಿಯನ್ನು ಮುಟ್ಟುವುದೇ ನಿಜವಾದ ಜೀವನ, ಸಂತಸದಿಂದ ಬದುಕೋಣ ಎಂದು ತಿಳಿಸಿದರು.

ವಿಶ್ವವನ್ನು ಅರ್ಥಮಾಡಿಕೊಂಡವರು ಅನುಭಾವಿಗಳು, ಅವರೇ ವಿಜ್ಞಾನಿಗಳು, ಅಂಥವರನ್ನು ಅಳತೆ ಮಾಡಲಾಗದು. ಶಾಂತವಾಗಿ ಆಂತರ್ಯದಲ್ಲಿರುವ ವಸ್ತುವೇ ಶಿವ, ಶಿವ ಶಾಂತ, ಶಿವ ನಿರಾಕಾರ, ವ್ಯಾಪಕವೇ ವಿಷ್ಣು, ವಿಸ್ತಾರವೇ ಬ್ರಹ್ಮ ಇದೇ ಸತ್ಯದ ಲಕ್ಷಣ, ಇದೇ ಆತ್ಮದ ಲಕ್ಷಣ, ಅದೇ ಜ್ಞಾನ, ಇದೇ ಸಾಧನೆ. ದೇವರು ನಿರ್ಮಿಸಿರುವ ಈ ಸುಂದರ ಸಾಮ್ರಾಜ್ಯದಲ್ಲಿ ನಾವು ಏನಾದರೂ ಸಾಧಿಸಬೇಕು. ಜಗತ್ತನ್ನು ಪ್ರೀತಿಸಬೇಕು. ಭೂಮಿ ಮೇಲಿರುವ ಗಾಳಿ, ಬೆಳಕು, ನೀರು ಇವುಗಳಲ್ಲಿ ಯಾವುದಾದರೂ ಒಂದು ಇಲ್ಲವೆಂದರೆ ಈ ಜಗತ್ತಿನಲ್ಲಿ ಯಾರೂ ಕೂಡ ಬದುಕಲು ಸಾಧ್ಯವಿಲ್ಲ, ಇಂತಹ ಸುಂದರ ಜಗತ್ತಿಗೆ ನಾವು ಧನ್ಯವಾದ ಅರ್ಪಿಸಬೇಕು ಎಂದು ವಿಜಯಪುರದ ಜ್ಞಾನಯೋಗಾಶ್ರಮದ ನಿರಾಭಾರ ಚರಮೂರ್ತಿಗಳಾದ   ಸಿದ್ಧೇಶ್ವರ ಮಹಾಸ್ವಾಮಿಗಳು ತಮ್ಮ ಪ್ರವಚನದಲ್ಲಿ ತಿಳಿಸಿದರು.

ಬೆಂಗಳೂರಿನ ವಿಭೂ ಅಕಾಡೆಮಿಯ ಅಧ್ಯಕ್ಷರಾದ ಡಾ. ವಿ.ಬಿ. ಆರತಿ ಮಾತನಾಡಿ  ಭಾರತ-ಒಂದು ಜೀವಂತ ಸಂಸ್ಕೃತಿ, ಭಾರತ ಎಂದ ಕೂಡಲೇ ದೇಶ-ವಿದೇಶಿಯರ ಮನದಲ್ಲಿ ಮೂಡುವುದು ಇಂದಿಗೂ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ, ಸಂಸ್ಕೃತಿ, ಬಣ್ಣ-ಬಣ್ಣದ ಹಬ್ಬಗಳು, ಮನಸೆಳೆಯುವ ಮೆರವಣಿಗೆ ಇತ್ಯಾದಿ. ಪ್ರತಿ ಕಿಲೋಮೀಟರ್‍ಗೆ ಬದಲಾಗುವ ಭಾಷೆ ಮತ್ತು ವೈವಿಧ್ಯತೆ ಅವರನ್ನು ಬೆಚ್ಚಬೆರಗಾಗಿಸುತ್ತವೆ. ಸಾವಿರಾರು ವರ್ಷಗಳಿಂದ ಭಾರತಾದ್ಯಂತ ಸಾವಿರಾರು ಸಂಸ್ಕೃತಿ, ಲಿಪಿ ಇರುವ ಭಾಷೆ, ಲಿಪಿ ಇಲ್ಲದ ಭಾಷೆ, ಜಾತಿ-ಉಪಜಾತಿಗಳ ಸಮನ್ವಯದಲ್ಲಿ ಜನರು ಸಹಬಾಳ್ವೆ ನಡೆಸುತ್ತಾ ಬಂದಿದ್ದಾರೆ. ಇಷ್ಟೊಂದು ವೈವಿಧ್ಯತೆ, ಭಿನ್ನತೆ ಇದ್ದರೂ ವಿಶ್ವ ಮಟ್ಟದಲ್ಲಿ ಭಾರತ ಹಲವು ವಿಷಯಗಳಲ್ಲಿ ಅಗ್ರ ಸ್ಥಾನದಲ್ಲಿಯೇ ಇದೆ ಎಂದು ತಿಳಿಸಿದರು.

ಪರಮಪೂಜ್ಯ ಜಗದ್ಗುರು   ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ  ನಡೆಯುತ್ತಿರುವ ಶಿಬಿರದಲ್ಲಿ   ಡಾ. ಕೆ.ಬಿ. ಚೇತಕ್, ಡಾ. ಪುರುಷೋತ್ತಮ ಶಾಸ್ತ್ರಿ ಹಾಗೂ ಡಾ. ಕೆ.ಬಿ. ಸುಮಾ ಉಪಸ್ಥಿತರಿದ್ದರು. (ಎಸ್.ಎಚ್)

 

 

Leave a Reply

comments

Related Articles

error: