ಕರ್ನಾಟಕಪ್ರಮುಖ ಸುದ್ದಿ

ಮೈಸೂರು ವಿವಿ ಶುಲ್ಕ ದಿಢೀರ್ ಏರಿಕೆ; ವಿದ್ಯಾರ್ಥಿಗಳ ತೀವ್ರ ಅಸಮಾಧಾನ

ಮೈಸೂರು (ಏ.29): ರಾಜ್ಯ ಸರ್ಕಾರವು ಮೈಸೂರು ವಿಶ್ವವಿದ್ಯಾನಿಲಯಕ್ಕೆ ನೀಡುತ್ತಿದ್ದ ಅನುದಾನದಲ್ಲಿ ಕಡಿತ ಮಾಡಿರುವ ಪರಿಣಾಮ ಹಣಕಾಸಿನ ಕೊರತೆ ಸರಿದೂಗಿಸಲು ಪ್ರವೇಶ ಮತ್ತು ಪರೀಕ್ಷಾ ಶುಲ್ಕವನ್ನು ಶೇ.10ರಷ್ಟು ಏರಿಕೆ ಮಾಡಲಾಗಿದೆ. ಈ ಬಗ್ಗೆ ವಿದ್ಯಾರ್ಥಿವರ್ಗದಲ್ಲಿ ತೀವ್ರ ಅಸಮಧಾನ ವ್ಯಕ್ತವಾಗಿದೆ.

ರಾಜ್ಯ ಸರ್ಕಾರದಿಂದ ಬರುತ್ತಿದ್ದ ಅನುದಾನದಲ್ಲಿ ಕಳೆದ ವರ್ಷಕ್ಕಿಂತ 16 ಕೋಟಿ ಕಡಿತಗೊಂಡಿದ್ದು, ಇದನ್ನು ಸರಿದೂಗಿಸಲು ಮೈಸೂರು ವಿವಿ ಈ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಪ್ರವೇಶ ಮತ್ತು ಪರೀಕ್ಷಾ ಶುಲ್ಕ ಹೆಚ್ಚಿಸಿ ಆಂತರಿಕ ಮೌಲ್ಯದಿಂದ ಸಂಪನ್ಮೂಲ ಕ್ರೋಢಿಕರಣಕ್ಕೆ ಕ್ರಮ ತೆಗೆದುಕೊಂಡಿದೆ. ವಿಶ್ವವಿದ್ಯಾಲಯದ ನಿರ್ವಹಣೆಗೆ 180 -200 ಕೋಟಿ ಅನುದಾನದ ಅಗತ್ಯವಿದ್ದು, 160 ಕೋಟಿ ರೂ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿತ್ತು. ಈ ಪೈಕಿ 122 ಕೋಟಿ ರೂ ನೀಡಿದೆ. ಕಳೆದ ವರ್ಷ 130 ಕೋಟಿ ರೂ.ನೀಡಿದ್ದು ಈ ಸಲ ಉಂಟಾಗಿರುವ ಹಣದ ಕೊರತೆಯನ್ನು ನೀಗಿಸಲು ಈ ಕ್ರಮ ಅನಿವಾರ್ಯ ಎಂದು ಮೈಸೂರು ವಿವಿ ಪ್ರತಿಪಾದಿಸಿದೆ.

ಸರ್ಕಾರ ನೀಡಿರುವ ಈ ಅನುದಾನದಲ್ಲಿ ವಿವಿ ಕಾಯಂ ಸಿಬ್ಬಂದಿಗೆ ವೇತನ, ನಿವೃತ್ತಿಯಾಗುವವರಿಗೆ ಪಿಂಚಣಿ ನೀಡುವುದಕ್ಕೆ 75 ಕೋಟಿ ಖರ್ಚಾಗಲಿದೆ. ಜೊತೆಗೆ ಪ್ರಯೋಗಾಲಯ, ಹಾಸ್ಟೆಲ್ ಗಳ ನಿರ್ವಹಣೆ , ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ, 650 ಅತಿಥಿ ಉಪನ್ಯಾಸಕರಿಗೆ ವೇತನ ನೀಡುವುದಕ್ಕೆ ಬಳಸಬೇಕಾಗಿದೆ. ಸುಮಾರು 60 ಕೋಟಿ ರೂ.ಕೊರತೆ ಉಂಟಾಗಿದೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ವಿವಿಗೆ ಇನ್ನಷ್ಟು ಅನುದಾನ ನೀಡಲು ರಾಜ್ಯ ಸರ್ಕಾರಕ್ಕೆ ಪತ್ರ ವ್ಯವಹಾರ ಮಾಡಲಾಗಿದೆ. ಶುಲ್ಕ ಪರಿಷ್ಕರಣೆ ಈಗಿನಿಂದಲೇ ಜಾರಿಗೆ ಬಂದಿದ್ದು, ಏ.24ರಂದು ವಿಶ್ವವಿದ್ಯಾಲಯದ ವೆಬ್‍ಸೈಟ್‍ನಲ್ಲಿ ಕುರಿತು ಮಾಹಿತಿ ಪ್ರಕಟಿಸಲಾಗಿದೆ. ಪ್ರತಿ ವರ್ಷ ಎ ಮತ್ತು ಬಿ ಸ್ಕೀಂ ಯೋಜನೆಯಡಿ ಪ್ರವೇಶಾತಿ ನೀಡಲಾಗುತ್ತಿದೆ. ಶುಲ್ಕ ಏರಿಕೆಯಿಂದ 2 ಕೋಟಿ ರೂ ಹೆಚ್ಚುವರಿಯಾಗಿ ಸಂಗ್ರಹವಾಗಲಿದೆ.

ಮೈಸೂರು ವಿವಿ ಅಧೀನ, ಸ್ನಾತಕ, ಸ್ನಾತಕೋತ್ತರ ಕೇಂದ್ರಗಳು, ಅಧ್ಯಯನ ಸಂಸ್ಥೆಗಳು, ವಿವಿ ಪ್ರಾದೇಶಿಕ ಕೇಂದ್ರಗಳಾದ ಮಂಡ್ಯ, ಹಾಸನ, ಚಾಮರಾಜನಗರದಲ್ಲಿರುವ ವಿವಿಧ ವಿಭಾಗಗಳ ಸ್ವಾಯತ್ತತೆಯ ಕಾಲೇಜುಗಳ ಪ್ರವೇಶ ಮತ್ತು ಪರೀಕ್ಷಾ ಶುಲ್ಕವನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: