ಕರ್ನಾಟಕಪ್ರಮುಖ ಸುದ್ದಿ

ಬೆಂಗಳೂರು ಬಂಡಾಯ! ಸಮಾನ ಮನಸ್ಕ ಶಾಸಕರ ಸಭೆ ದಿಢೀರ್ ಮುಂದೂಡಿಕೆ!

ಬೆಂಗಳೂರು (ಏ.29): ಹಠಾತ್ತಾಗಿ ಸಮಾನ ಮನಸ್ಕ ಶಾಸಕರ ಸಭೆ ಕರೆದಿದ್ದ ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್ ಅವರು ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ. ಪ್ರಸಕ್ತ ರಾಜಕೀಯ ಸನ್ನಿವೇಶ ದಿನದಿಂದ ಬಿಗಡಾಯಿಸುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾನ ಮನಸ್ಕರೆಲ್ಲ ಒಟ್ಟಾಗಿ ಸಭೆ ಸೇರಿ ಚರ್ಚಿಸಿ ಪರಿಹಾರ ಕಂಡುಕೊಳ್ಳೋಣ ಎಂದು ನಾಳೆ ಖಾಸಗಿ ಹೋಟೆಲ್‍ನಲ್ಲಿ ಸಭೆ ಕರೆದಿದ್ದರು. ಆದರೆ, ನಾಳಿನ ಸಭೆಯನ್ನು ಅವರು ದಿಢೀರ್ ಮುಂದೂಡಿದ್ದಾರೆ.

ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭೆ ಉಪ ಚುನಾವಣೆ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬಹುತೇಕ ಶಾಸಕರು ಅಲ್ಲಿಗೆ ತೆರಳಿದ್ದಾರೆ. ಹಾಗಾಗಿ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಮುಂದೂಡಲಾಗಿದೆ.

ಸಮಾನ ಮನಸ್ಕರ ಸಭೆಯನ್ನು ಯಾವಾಗ ನಡೆಸಬೇಕೆನ್ನುವುದನ್ನು ಮುಂದೆ ತೀರ್ಮಾನಿಸುತ್ತೇವೆ ಎಂಬುದನ್ನು ಎಸ್.ಟಿ.ಸೋಮಶೇಖರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ನಿನ್ನೆ ಎಲ್ಲ ಶಾಸಕರಿಗೆ ಪತ್ರ ಬರೆದು ಹಾಲಿ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಿ ತಮ್ಮ ಅಮೂಲ್ಯ ಸಲಹೆ ನೀಡುವಂತೆ ಮನವಿ ಮಾಡಿದ್ದರು. ಇದಕ್ಕೆ ಹಲವು ಸ್ವಪಕ್ಷೀಯರೇ ವಿರೋಧ ಕೂಡ ಮಾಡಿದ್ದರು. ಈಗ ಉಪ ಚುನಾವಣೆ ಹಿನ್ನೆಲೆಯಲ್ಲಿ ಸಭೆ ಮುಂದೂಡಿರುವುದಾಗಿ ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: