ಕರ್ನಾಟಕಪ್ರಮುಖ ಸುದ್ದಿಮೈಸೂರು

ಪೋಕ್ಸೋ ಕಾಯ್ದೆಯ ನಿಯಮಗಳು ತಿಳಿದಿಲ್ಲವೇ ? ಅಧಿಕಾರಿಗಳನ್ನು ತರಾಟೆಗೆ ತೆದುಕೊಂಡ ಉಗ್ರಪ್ಪ

ಏನ್ರಿ ಇದು? ಬಡವರ ಮಕ್ಕಳು ಎಂದರೆ ಎಲ್ಲೆಂದರಲ್ಲಿ ಬಿಸಾಡಬಹುದೆ? ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲವೇ? ನಿಮಗೆ ಸ್ವಲ್ಪವಾದರು ಕಾಮನ್‍ಸೆನ್ಸ್ ಇದೆಯೇ? ಸರ್ಕಾರ ನಿಮಗೆ ಸಂಬಳ ನೀಡುವುದಿಲ್ಲವೆ? ಇಲ್ಲಿಯೇ ಈ ರೀತಿಯಾದರೆ ಬಡವರ ಗತಿಯೇನು…..ದೇವರೇ ಕಾಪಾಡಬೇಕು.

ಇದು ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ವೈದ್ಯರು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ.

ಹೆಚ್.ಡಿ.ಕೋಟೆಯ ಹಾಡಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಮಗುವನ್ನು ಸಂತೈಸಲು ಗುರುವಾರ  ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಆಸ್ಪತ್ರೆಯ ಅವ್ಯವಸ್ಥೆಯನ್ನು ಕಂಡು ಕೆಂಡಾಮಂಡಲರಾದರು. ಸಂತ್ರಸ್ಥ ಮಗುವನ್ನು ವಿಶೇಷ ಘಟಕದ ಕೊಠಡಿಯಲ್ಲಿ ಇರಿಸದೆ ಸಾಮಾನ್ಯ ವಾರ್ಡ್‍ನಲ್ಲಿ ಇರಿಸಿರುವುದನ್ನು ಕಂಡು ಕುಪಿತರಾದ ಅವರು ಹೆಚ್ಚುವರಿ ಎಸ್ಪಿ ಕಲಾಕಷ್ಣಸ್ವಾಮಿ, ಇನ್ಸ್‍ಪೆಕ್ಟರ್ ಹರೀಶ್ ಕುಮಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಲೈಂಗಿಕ ದೌರ್ಜನ್ಯಕೆ ಒಳಗಾದವರಿಗೆ ಪೋಕ್ಸೊ ಕಾಯ್ದೆಯಡಿ ರಕ್ಷಣೆ ನೀಡಿ ಗೌಪ್ಯತೆ ಕಾಪಾಡುವುದು ನಮ್ಮ ಕರ್ತವ್ಯ. ಆದರೆ ಇಲ್ಲಿ ಯಾವುದನ್ನೂ ಮಾಡಿಲ್ಲ. ಬಡವರು, ಅನಕ್ಷರಸ್ಥರು, ಹರಕಲು ಬಟ್ಟೆ ಧರಿಸಿದ್ದಾರೆ ಎಂದು ಸಾಮಾನ್ಯವಾರ್ಡ್‍ನಲ್ಲಿ ಇರಿಸಲಾಗಿದೆ. ಇದರ ಹಿಂದಿರುವ ಉದ್ದೇಶವಾದರೂ ಏನು? ನಿಮಗೆ ಪೋಕ್ಸೋ ಕಾಯ್ದೆಯ ನಿಯಮಗಳು ತಿಳಿದಿಲ್ಲವೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಲಾಕೃಷ್ಣಸ್ವಾಮಿ ದೌರ್ಜನ್ಯಕ್ಕೆ ಒಳಗಾದ ಮಗು ಸೋಮವಾರ ಸಂಜೆ ಆಸ್ಪತ್ರೆಗೆ ಬಂದಿದ್ದು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜತೆಗೆ ವಿಶೇಷ ಚಿಕಿತ್ಸೆಯನ್ನು ಸಹ ನೀಡಲಾಗುತ್ತಿದ್ದು ಗೌಪ್ಯತೆ ಕಾಪಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ದಾಖಲಾತಿ ಪುಸ್ತಕವನ್ನು ತರಿಸಿ ಮಾಹಿತಿಯನ್ನು ಪರಿಶೀಲಿಸಿದ ಉಗ್ರಪ್ಪ ಅವರು ಕಾನೂನು ಸಲಹೆಗಾರ್ತಿ ಮಧು ಅವರನ್ನು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಅದಕ್ಕೆ ಅವರು ದಾಖಲಾತಿ ಪುಸ್ತಕವನ್ನು ನೋಡಿಲ್ಲ. ಕಾನೂನು ಸಲಹೆಗಳನ್ನು ನೀಡಿದ್ದೇನೆ. ಬೆಳಗ್ಗೆ 10.30ರೊಳಗೆ ಮಾಹಿತಿ ತಿಳಿಸಿದರೆ ಮಾತ್ರ ಕ್ರಮಕೈಗೊಳ್ಳುತ್ತೇನೆ ಎಂದರು. ಮಧು ಅವರ ಪ್ರತಿಕ್ರಿಯೆಗೆ ಕೆಂಡಾಮಂಡಲರಾದ ಉಗ್ರಪ್ಪ ಅವರು ದಾಖಲಾತಿ ಪುಸ್ತಕವನ್ನು ನೋಡುವ ಸೌಜನ್ಯವೂ ನಿಮಗೆ ಇಲ್ಲವೆಂದ ಮೇಲೆ ನೀವು ಯಾವ ರೀತಿ ಕೆಲಸ ಮಾಡುತ್ತಿದ್ದೀರಿ ಎಂಬುದು ತಿಳಿಯುತ್ತದೆ. ನಿಮ್ಮ ಸರ್ವಾಧಿಕಾರಿ ಧೋರಣೆಯನ್ನು ಬಿಟ್ಟು ಹೇಳಲಿ ಬಿಡಲಿ ಪ್ರತಿದಿನ ದಾಖಲಾತಿ ಪುಸ್ತಕಗಳನ್ನು ನೋಡಿ ಎಂದು ಸೂಚಿಸಿದರು.

ಔಷಧಿಗಳನ್ನೇ ನೀಡುತ್ತಿಲ್ಲ: ಹುಣಸೂರಿನ ಮಂಜುಳ ಎಂಬುವರು ತಮ್ಮ ಮಗುವನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದು ಔಷಧಿಗಳನ್ನು ಹೊರಗಡೆಯಿಂದ ತರಲಾಗುತ್ತಿದೆ. ಯಾವುದೇ ಔಷಧಿಗಳನ್ನು ಆಸ್ಪತ್ರೆ ವತಿಯಿಂದ ನೀಡುತ್ತಿಲ್ಲ. ಒಮ್ಮೆ ಕಿಡ್ನಿ ಸಮಸ್ಯೆ ಎಂದರೆ ಇನ್ನೊಮ್ಮೆ ಮೆದುಳಿನ ಸಮಸ್ಯೆ ಎಂದು ಹೇಳುತ್ತಾರೆ. ಮತ್ತೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ. ಔಷಧಿಗಳನ್ನು ನಾವೇ ತರುವುದಾದರೆ ಸರ್ಕಾರಿ ಆಸ್ಪತ್ರೆಗೆ ಯಾಕೆ ಬರಬೇಕು ಎಂದರೆ ಇಷ್ಟವಿದ್ದರೆ ಇರಿ, ಇಲ್ಲದಿದ್ದರೆ ಮಗುವನ್ನು ಕರೆದುಕೊಂಡು ಹೋಗಿ ಎಂದು ಗದರುತ್ತಾರೆ. ವೈದ್ಯರ ಹೆಸರನ್ನು ಕೇಳಿದರೆ ಹೇಳುವುದಿಲ್ಲ. ಇಲ್ಲಿಯವರೆಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಔಷಧಿಗಳನ್ನು ಹೊರಗಡೆಯಿಂದ ತರಲಾಗಿದೆ ಎಂದು ದೂರಿದರು.

ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡಿ ಔಷಧಿಗಳನ್ನು ವಿತರಿಸುವುದು ಬಡವರಿಗಾಗಿ. ಹೊರಗಡೆಯಿಂದ ಔಷಧಿ ತರುವುದಾದರೆ ಸರ್ಕಾರಿ ಆಸ್ಪತ್ರೆಗಳಿಗೆ ಯಾಕೆ ಬರಬೇಕು. ಆಸ್ಪತ್ರೆಯಲ್ಲಿರುವ ಔಷಧಿಗಳ ಮಾಹಿತಿ ಚಾರ್ಟನ್ನು ಆಯಾ ವಿಭಾಗದಲ್ಲಿ ಹಾಕಬೇಕು. ಆದರೆ ಇಲ್ಲಿ ಔಷಧಿಗಳ ಮಾಹಿತಿಯೇ ಇಲ್ಲ. ಆಸ್ಪತ್ರೆಯಲ್ಲಿ ಉತ್ತಮ ವಾತಾವರಣವಿದ್ದರೂ ದೌರ್ಜನ್ಯಕ್ಕೆ ಒಳಗಾದವರ ಗೌಪ್ಯತೆ ಕಾಪಾಡುವಲ್ಲಿ ಅಧಿಕಾರಿಗಳು, ಪೊಲೀಸರು ಸಂಪೂರ್ಣ ವಿಫಲವಾಗಿದ್ದಾರೆ. ಆಸ್ಪತ್ರೆಯ ಸಂದರ್ಭಗಳನ್ನು ನೋಡಿ ನನಗೆ ಆಘಾತವಾಗಿದೆ. ಈ ಎರಡೂ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ ಸಂಪೂರ್ಣ ವರದಿ ನೀಡುವಂತೆ ಆಸ್ಪತ್ರೆಯ ಮುಖ್ಯಸ್ಥರಿಗೆ ತಿಳಿಸಿದ್ದು  ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಉಗ್ರಪ್ಪ ತಿಳಿಸಿದರು.

ಸಮಿತಿಯ ಸದಸ್ಯರಾದ ರಾಣಿ ಸತೀಶ್, ವಸುಂಧರಾ ಭೂಪತಿ, ಲೀಲಾ ಸಂಪಿಗೆ, ಜ್ಯೋತಿ, ಪ್ರಭಾ, ರೇಣುಕಾ, ಜಿಲ್ಲಾಧಿಕಾರಿ ಡಿ.ರಂದೀಪ್, ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿ ರಾಧ, ಪದ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: