ಮೈಸೂರು

ಪೊಲೀಸರು ವಿದ್ಯಾರ್ಥಿಗಳ ಮೇಲೆ ವೃಥಾ ಕೇಸ್ ದಾಖಲಿಸಿಕೊಳ್ಳುತ್ತಿದ್ದಾರೆ : ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರಿನ ವಿವಿಪುರಂ ಸಂಚಾರಿ ಠಾಣಾ ಪೊಲೀಸರು ಕಾಲೇಜು ಕ್ಯಾಂಪಸ್ ಒಳಗೆ ನುಗ್ಗಿ ಅನಗತ್ಯವಾಗಿ ಬೈಕ್ ಗಳನ್ನು ಎತ್ತಿ ಹಾಕಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿ ಸೇಂಟ್ ಜೋಸೆಪ್ ಕಾಲೇಜಿನ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ನಾಲ್ಕು ರಸ್ತೆಗಳನ್ನು ಬಂದ್ ಮಾಡಿ ಮಾನವ ಸರಪಳಿಯನ್ನು ನಿರ್ಮಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ವಿವಿಪುರಂ ಸಂಚಾರಿ ಠಾಣೆ ಪೊಲೀಸರು ನಿಮ್ಮ ಗಾಡಿಯ ಸೈಲೆನ್ಸರ್ ಸರಿ ಇಲ್ಲ ಹೀಗೆ ಏನೇನೋ ನೆಪಗಳನ್ನು ಹೇಳಿ ಕ್ಯಾಂಪಸ್ ಒಳಗಡೆ ಇರಿಸಲಾಗುವ ಬೈಕ್ಗಳನ್ನು ಕೊಂಡೊಯ್ಯುತ್ತಿದ್ದಾರೆ, ವಿದ್ಯಾರ್ಥಿಗಳ ಮೇಲೆ ವೃಥಾ ಕೇಸ್ ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನಾಕಾರರನ್ನು ಮಹಾನಗರ ಪಾಲಿಕೆಯ ನಗರಯೋಜನೆ ಸ್ಥಾಯಿ ಸಮಿತಿಯ ಅಧ್ಯಕ್ಷ ನಂದೀಶ್ ಪ್ರೀತಂ ಬೆಂಬಲಿಸಿದರು.

ಪ್ರತಿಭಟನಾ ಸ್ಥಳಕ್ಕೆ ಸಬ್ ಇನ್ಸಪೆಕ್ಟರ್ ನರೇಂದ್ರಬಾಬು, ಇನ್ಸಪೆಕ್ಟರ್ ವಿವೇಕಾನಂದ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಸ್ಥಳಕ್ಕೆ ಎಸಿಪಿ ಬರುವವರೆಗೂ ತಾವು ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ವಿದ್ಯಾರ್ಥಿಗಳು ಹಠ ಹಿಡಿದಿದ್ದಾರೆ.

ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿರುವುದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದೆ.

Leave a Reply

comments

Related Articles

error: