ಮೈಸೂರು

ಎಸ್ಎಸ್ಎಲ್ಸಿ ಫಲಿತಾಂಶ: ಐಡಿಯಲ್ ಜಾವಾ ರೋಟರಿ ಶಾಲೆಯ ವಿದ್ಯಾರ್ಥಿ ರೋಹನ್ ಟಾಪರ್; ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶಕ್ಕೆ ಶ್ರಮಿಸುತ್ತೇವೆ ಡಿಡಿಪಿಐ ಡಾ.ಪಾಡುರಂಗ

ಮೈಸೂರು,ಏ.30-2019ನೇ ಸಾಲಿನ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಮೈಸೂರಿಗೆ ಶೇ.80.32 ರಷ್ಟು ಫಲಿತಾಂಶ ಲಭ್ಯವಾಗಿದೆ.
ಐಡಿಯಲ್ ಜಾವಾ ರೋಟರಿ ಶಾಲೆಯ ವಿದ್ಯಾರ್ಥಿ ರೋಹನ್ ವಿ.ಗಂಗಾಡ್ಕರ್ 622 ಅಂಕಗಳಿಸಿ ಮೈಸೂರು ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಸಂಸ್ಕೃತದಲ್ಲಿ 125, ಇಂಗ್ಲಿಷ್ ನಲ್ಲಿ 100, ಕನ್ನಡದಲ್ಲಿ 100, ಗಣಿತದಲ್ಲಿ 99, ವಿಜ್ಞಾನದಲ್ಲಿ 100, ಸಮಾಜ ವಿಜ್ಞಾನದಲ್ಲಿ 98 ಅಂಕಗಳಿಸಿದ್ದು, ಒಟ್ಟು 622 ಅಂಕಗಳಿಸಿದ್ದಾರೆ. ರೋಹನ್ ವಿ.ಗಂಗಾಡ್ಕರ್ ಲಾಗೈಡ್ ಪತ್ರಿಕೆಯ ಸಂಪಾದಕರು ‌ ಹಾಗೂ ವಕೀಲರು ಆಗಿರುವ ಎಚ್.ಎನ್. ವೆಂಕಟೇಶ್ ಮತ್ತು ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಮಂಜುಳಾ ದಂಪತಿ ಪುತ್ರ.
ಮೈಸೂರಿಗೆ ಪ್ರಥಮ ಸ್ಥಾನಗಳಿಸಿರುವ ರೋಹನ್ ಗೆ ಶಾಲಾ ಪ್ರಾಂಶುಪಾಲರಾದ ಎಸ್.ಎ.ವೀಣಾ, ಅಧ್ಯಕ್ಷ ವಾಸುದೇವ ಭಟ್ ಹೂ ಗುಚ್ಛ ನೀಡಿ, ಸಿಹಿ ತಿನ್ನಿಸಿ ಅಭಿನಂದಿಸಿದರು.


ವಿಜಯವಿಠಲ ವಿದ್ಯಾಶಾಲೆಯ ಹೆಚ್.ಕೆ.ತೇಜಸ್ 621, ನಿರಂತರ ದಿನೇಶ್ 620, ಐಡಿಯಲ್ ಜಾವಾ ರೋಟರಿ ಶಾಲೆಯ ಸ್ಕಂದ ದತ್ತ 618, ವಿಜಯವಿಠಲ ವಿದ್ಯಾಶಾಲೆಯ ಬಿ.ಚೇತನ 617, ರಾಮನಾಥ್ ಆರ್.ಭಂಡಾರ್ಕರ್ 616, ಕುಶಾಲ್ ಮಾದಪ್ಪ 609, ಎಂ.ಶಿವಾನಿ 608, ತರುಣ್ ಸಾಗರ್ 605, ಮರಿಮಲ್ಲಪ್ಪ ಶಾಲೆಯ ವಿದ್ಯಾರ್ಥಿ ಅಭಿಷೇಕ್ 604 ಗಳಿಸಿದ್ದಾರೆ.
ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ರೋಹನ್ ಪೋಷಕರು ಹೆಚ್ಚು ಓದುವಂತೆ ಯಾವುದೇ ರೀತಿಯ ಒತ್ತಡವನ್ನು ಹಾಕಿರಲಿಲ್ಲ. ಓದುವುದಿಲ್ಲ ಎಂದು ಟಿವಿಯ ಕೇಬಲ್ ಕಟ್ ಮಾಡಿಸಿರಲಿಲ್ಲ. ಬದಲಿಗೆ ಓದಿಗೆ ಉಪಯೋಗವಾಗುವಂತೆ ಎಲ್ಲ ರೀತಿಯ ಸಹಕಾರ ನೀಡಿದರು. ನನ್ನ ಈ ಸಾಧನೆಯಲ್ಲಿ ಶಿಕ್ಷಕರು ಬಹಳ ಮುಖ್ಯ ಪಾತ್ರ ವಹಿಸಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವ ಮೂಲಕ ಉತ್ತಮ ಬೋಧನೆ ಮಾಡಿದ್ದಾರೆ. ಉತ್ತಮ ಅಂಕಗಳಿಸಿರುವುದಕ್ಕೆ ಸಂತೋಷವಾಗುತ್ತಿದೆ ಎಂದಿದ್ದಾರೆ.
ನನಗೆ ಹಾಡು ಕೇಳುವುದು, ಹೊಸ ಸಿನಿಮಾಗಳನ್ನು ನೋಡುವುದು ತುಂಬಾ ಇಷ್ಟ. ಟಿವಿಯಲ್ಲಿ ಸ್ಪೋರ್ಟ್ ತುಂಬಾ ನೋಡುತ್ತೇನೆ. ಕ್ರಿಕೆಟ್ ಅಂದರೆ ಇಷ್ಟ. ಆದರೆ ಈ ಬಾರಿ ಕ್ರಿಕೆಟ್ ಆಡುವುದನ್ನು ಸ್ವಲ್ಪ ಕಡಿಮೆ ಮಾಡಿದ್ದೆ ಎಂದು ರೋಹನ್ ತಿಳಿಸಿದ್ದಾರೆ.

ಮಗನ ಈ ಸಾಧನೆಗೆ ಪೋಷಕರು ಸಂತಸಗೊಂಡಿದ್ದಾರೆ. ಯಾವುದೇ ಟ್ಯೂಷನ್‌ಗೂ ಸೇರದೆ ಶಾಲೆಯಲ್ಲಿ ಶಿಕ್ಷಕರು ಮಾಡಿದ ಪಾಠವನ್ನು ಗಮನವಿಟ್ಟು ಆಲಿಸಿ ಮನೆಯಲ್ಲಿ ಮತ್ತೆ ಅದನ್ನು ಅಭ್ಯಾಸ ಮಾಡುವ ಮೂಲಕ ಮಗ ಈ ಸಾಧನೆ ಮಾಡಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಿಡಿಪಿಐ ಡಾ.ಪಾಂಡುರಂಗ ಫಲಿತಾಂಶದಲ್ಲಿ 17ನೇ ಸ್ಥಾನದಲ್ಲಿ ಜಿಲ್ಲೆ ಗುರುತಿಸಿಕೊಂಡಿರುವುದಕ್ಕೆ ಪ್ರತಿಕ್ರಿಯಿಸಿ, ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಧೃತಿಗೆಡದೆ ಮರು ಪರೀಕ್ಷೆಯತ್ತ ಗಮನಹರಿಸಿ ಓದಬೇಕು. ಮುಂದಿನ ದಿನಗಳಲ್ಲಿ ಮೈಸೂರಿಗೆ ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ವ್ಯಾಸಂಗದಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಶಿಕ್ಷಕರು, ಸಂಪನ್ಮೂಲ ಶಿಕ್ಷಕರ ಮೂಲಕ ಮಾರ್ಗದರ್ಶನ ನೀಡುತ್ತೇವೆ. ವೈಯುಕ್ತಿಕವಾಗಿಯೂ ವಿವಿಧ ವಿಷಯಗಳಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸಿ ಉತ್ತಮ ಫಲಿತಾಂಶ ಬರುವಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಫಲಿತಾಂಶ ಹಿಂದಿರುವುದಕ್ಕೆ ಕಾರಣ ಏನೆಂಬುದನ್ನು ತಿಳಿದುಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಬರುವಂತೆ ಶಾಲಾ ಪ್ರಾರಂಭ ದಿನಗಳಲ್ಲೇ ಉತ್ತಮ ಶಿಕ್ಷಣ ನೀಡಲು ಪ್ರಾರಂಭಿಸುತ್ತೇವೆ. ಈ ನಿಟ್ಟಿನಲ್ಲಿ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಲಹೆ ಪಡೆಯುತ್ತೇವೆ. ಉತ್ತಮ ಫಲಿತಾಂಶಕ್ಕೆ ಶ್ರಮಿಸುತ್ತೇವೆ ಎಂದ ಅವರು, ಪಾಲಕರು ಶಿಕ್ಷಕರ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕು. ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಹಿಂದೆ ಇದ್ದಾರೆ ಅದನ್ನರಿತು ಆ ವಿಷಯವನ್ನು ಹೆಚ್ಚು ಗಮನಹರಿಸುವಂತೆ ಮಾಡಬೇಕು ಎಂದರು. ( ಎಂ.ಎನ್)

Leave a Reply

comments

Related Articles

error: