ಕರ್ನಾಟಕಪ್ರಮುಖ ಸುದ್ದಿ

ಎಸ್‍ಎಸ್‍ಎಲ್‍ಸಿ ಸಾಧಕರಿಗೆ ಅಭಿನಂದನೆ; ನಪಾಸಾದವರಿಗೆ ಸಿಎಂ ಸಾಂತ್ವನ

ಬೆಂಗಳೂರು (ಏ.30): ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಕಳೆದ ವರ್ಷಕ್ಕಿಂತ ತುಸು ಹೆಚ್ಚಾಗಿರುವುದು ಸಂತೋಷದ ವಿಷಯ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.

ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು, ಶಾಲೆಗಳಿಗೆ ಅಭಿನಂದನೆಗಳು. ಅನುತ್ತೀರ್ಣರಾದ ವಿದ್ಯಾರ್ಥಿಗಳು ನಿರಾಸೆ ಹೊಂದುವ ಅಗತ್ಯವಿಲ್ಲ. ಮುಂದಿನ ಬಾರಿ ಹೆಚ್ಚಿನ ಪರಿಶ್ರಮ ವಹಿಸಿ ಪರೀಕ್ಷೆ ಎದುರಿಸಿ, ಯಶಸ್ವಿಯಾಗಿ ಎಂದು ಅವರು ಧೈರ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಗಳ ಫಲಿತಾಂಶ ತ್ವರಿತವಾಗಿ ಪ್ರಕಟವಾಗುವ ಮೂಲಕ ಪೋಷಕರು ಹಾಗೂ ವಿದ್ಯಾರ್ಥಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಇಡೀ ಪರೀಕ್ಷಾ ಪ್ರಕ್ರಿಯೆಯನ್ನು ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಯಶಸ್ವಿಯಾಗಿ ನಿರ್ವಹಿಸಿದ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳು ಉತ್ತಮ ಸಾಧನೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಶಾಲೆಗಳ ಮಕ್ಕಳು ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳು ಅತ್ಯುತ್ತಮ ಸಾಧನೆ ತೋರಬಲ್ಲರು ಎಂಬುದಕ್ಕೆ ಇದು ನಿದರ್ಶನ. ಯಾವುದೇ ಸರ್ಕಾರಿ ಶಾಲೆ ಶೂನ್ಯ ಫಲಿತಾಂಶ ದಾಖಲಿಸದೆ ಇರುವುದು ಹಾಗೂ ಶೇ. 100 ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ 102 ರಿಂದ 593ಕ್ಕೆ ಹೆಚ್ಚಳವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಉತ್ತಮ ಪಡಿಸಲು ಅಧಿಕಾರಿಗಳು ಕೈಗೊಂಡ ಕ್ರಮಗಳು ಫಲ ನೀಡಿದೆ ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: