ಪ್ರಮುಖ ಸುದ್ದಿ

ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ : ಸಮಾಜ ಪತ್ರಕರ್ತರ ಮೇಲಿಟ್ಟಿರುವ ನಂಬಿಕೆ ಹುಸಿಯಾಗದಿರಲಿ : ಶಿವಾನಂದ ತಗಡೂರು ಸಲಹೆ

ರಾಜ್ಯ(ಮಡಿಕೇರಿ) ಮೇ.1: – ಪತ್ರಕರ್ತರು ತಮ್ಮ ಜವಬ್ದಾರಿಯನ್ನು ಮರೆತರೆ ಸಮಾಜ ಕ್ಷಮಿಸುವುದಿಲ್ಲ, ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜ ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಹೋಗಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಲಹೆ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಪತ್ರಕರ್ತರೇ ಸುದ್ದಿಯಾಗುತ್ತಿರುವುದು ವಿಷಾದನೀಯ, ನಮ್ಮನ್ನೇ ನಾವು ಆತ್ಮವಲೋಕನ ಮಾಡಿಕೊಳ್ಳಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತರು ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಶ್ರಮಿಸುವ ವೈದ್ಯರಿದ್ದಂತೆ, ಸಮಾಜದಲ್ಲಿ ನಡೆಯುವ ಲೋಪಗಳನ್ನು ತಿದ್ದುವ ಕೆಲಸ ನಿರಂತರವಾಗಿ ನಡೆಯಬೇಕು. ಯಾವುದೇ ಜಾತಿಗೆ ಸೀಮಿತವಾಗಿರದೆ ಎಲ್ಲಾ ವರ್ಗದ ಜನರ ಪರವಾಗಿ ಕಾರ್ಯನಿರ್ವಹಿಸುವ ಜವಬ್ದಾರಿ ಪತ್ರಕರ್ತರ ಮೇಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪತ್ರಕರ್ತರ ಭವನ ಆಗಬೇಕೆನ್ನುವ ಅಭಿಲಾಷೆ ಇದೆ. ಈಗಾಗಲೇ ಕೆಲವು ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಭವನ ನಿರ್ಮಾಣವಾಗಿದೆ ಎಂದರು.
ಪತ್ರಕರ್ತರ ಸಂಘಟನೆ ಕೇವಲ ವೃತ್ತಿಗೆ ಸೀಮಿತವಾಗಿರದೆ ಸಂಕಷ್ಟದ ಸಂದರ್ಭ ಸ್ಪಂದಿಸುವ ಗುಣ ಹೊಂದಿರಬೇಕೆಂದು ಶಿವಾನಂದ ತಗಡೂರು ಹೇಳಿದರು.
ಕೊಡಗು ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪತ್ರಕರ್ತರು ವಾಸ್ತವಾಂಶದ ವರದಿಗಳಿಗೆ ಆದ್ಯತೆ ನೀಡುವುದರೊಂದಿಗೆ ಸಾಮಾಜಿಕ ಕಳಕಳಿಯನ್ನು ಕೂಡ ಮೆರೆಯಬೇಕೆಂದು ಕಿವಿಮಾತು ಹೇಳಿದರು. ಸಮಾಜದ ಬದಲಾವಣೆಯಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು ಎಂದರು.
ಕೊಡಗು ಪ್ರೆಸ್‍ಕ್ಲಬ್‍ನ ಮಾಜಿ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಮುಂದಿನ ವರ್ಷದಿಂದ ತಮ್ಮ ತಾತ ದಿ. ಡಿ.ಎಂ.ಕೃಷ್ಣಯ್ಯ ಅವರ ಹೆಸರಿನಲ್ಲಿ ಮಹಿಳಾ ಪತ್ರಕರ್ತರಿಗೆ ಪ್ರಶಸ್ತಿಯನ್ನು ನೀಡಲಾಗುವುದೆಂದರು.
ಪ್ರಕೃತಿ ವಿಕೋಪದ ಸಂದರ್ಭ ಪತ್ರಕರ್ತರು ಸುದ್ದಿಯ ಜೊತೆಗೆ ಮಾನವೀಯತೆಯನ್ನು ಮೆರೆದಿರುವುದು ಶ್ಲಾಘನೀಯ. ಸಂತ್ರಸ್ತರಿಗೆ ಅಗತ್ಯ ಸೌಲಭ್ಯವನ್ನು ಒದಗಿಸಿಕೊಡುವಲ್ಲಿ ಮಾಧ್ಯಮದವರ ಪಾತ್ರ ದೊಡ್ಡದಾಗಿತ್ತು. ಆದರೆ ಪತ್ರಕರ್ತರನ್ನು ಗುರುತಿಸದೇ ಇರುವುದು ವಿಷಾದಕರವೆಂದು ಬೇಸರ ವ್ಯಕ್ತಪಡಿಸಿದರು.
ಮೈಸೂರಿನ ಮಾನಸಗಂಗೋತ್ರಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಸಪ್ನಾ ನಾಯಕ್ “ಪರ್ತಕರ್ತರ ಹೊಣೆಗಾರಿಕೆ” ಎಂಬ ವಿಷಯದ ಬಗ್ಗೆ ಮುಖ್ಯ ಭಾಷಣ ಮಾಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೋಮವಾರಪೇಟೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಹರೀಶ್ ಉಪಸ್ಥಿತರಿದ್ದರು.
ಅತ್ಯುತ್ತಮ ವರದಿಗಳಿಗಾಗಿ 13 ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: