ಮೈಸೂರು

ಪತ್ರಿಕಾ ವಿತರಕರನ್ನು ಅಭಿನಂದಿಸುವ ಮೂಲಕ ವಿಶ್ವ ಕಾರ್ಮಿಕರ ದಿನಾಚರಣೆ ಆಚರಿಸಿದ ಪಾತಿ ಫೌಂಡೇಶನ್

ಮೈಸೂರು,ಮೇ.1:-  ವಿಶ್ವ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಪಾತಿ ಫೌಂಡೇಶನ್ ವತಿಯಿಂದ ಅಗ್ರಹಾರದ ವೃತ್ತದಲ್ಲಿ‌  ಪತ್ರಿಕಾ ವಿತರಕರಿಗೆ ಅಭಿನಂದಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅಗ್ರಹಾರ ಚಾಮುಂಡಿಪುರಂ ರಾಮಾನುಜ ರಸ್ತೆಯ ಬಡಾವಣೆಗಳಲ್ಲಿ ಸತತ 40ವರ್ಷಗಳಿಂದ ಶಾಲಾ ಬಾಲ್ಯದ ದಿನಗಳಿಂದ ಇಲ್ಲಿಯವರೆಗೂ ನಿರಂತರವಾಗಿ ಪತ್ರಿಕಾ ವಿತರಕದ ವೃತ್ತಿಯಲ್ಲಿ ತೊಡಗಿರುವ ಪೇಪರ್ ಮಂಜುನಾಥ್, ಪೇಪರ್ ಚೇತನ್, ಪೇಪರ್ ಮಂಜಣ್ಣ ನವರನ್ನು ಸಾರ್ವಜನಿಕವಾಗಿ ಅವರು ಕೆಲಸ ಮಾಡುವ ಸ್ಥಳದಲ್ಲೇ  ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ಮಾಜಿ ನಗರಪಾಲಿಕೆ ಸದಸ್ಯ ಪಾತಿ ಫೌಂಡೇಶನ್ ಅಧ್ಯಕ್ಷ ಎಂ.ಡಿ ಪಾರ್ಥಸಾರಥಿ ಮಾತನಾಡಿ ಇಂದಿನ ತಾಂತ್ರಿಕ ಸ್ಪರ್ಧಾತ್ಮಕ ಯುಗದಲ್ಲಿ ಬುದ್ಧಿವಂತಿಕೆ ಮತ್ತು ಶಿಕ್ಷಣದ ಜ್ಞಾನದ ಪ್ರಮಾಣದ ಮೇಲೆ ದುಡಿಯುವ ಕಾಲ ನಿರ್ಮಾಣವಾಗಿದೆ ಆದರೆ ನೂರಾರು ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ದುಡಿಯಬೇಕು. ಆತನ ಆರ್ಥಿಕ ಪರಿಸ್ಥಿತಿ ನಿರ್ವಹಣೆಗೆ ‘ಸಂಬಳ’ ಏನೆಂದು ಗೊತ್ತಿರಲಿಲ್ಲ. ಆ ಸಂದರ್ಭದಲ್ಲಿ 1881 ರ ಮೇ 1 ರಂದು ಮೊದಲ ಬಾರಿಗೆ, ದಿನಕ್ಕೆ 8 ಗಂಟೆಗಳ ಕೆಲಸದ ಕಾನೂನನ್ನು ಜಾರಿಗೊಳಿಸಲಾಯಿತು.  ನಂತರ  1886ರಲ್ಲಿ ಅಮೇರಿಕಾದಲ್ಲಿ ಮೊಟ್ಟಮೊದಲಾಗಿ ಮೇ 1 ಕಾರ್ಮಿಕರ ದಿನವಾಗಿ ಘೋಷಿತವಾಯಿತು. ಭಾರತದಲ್ಲಿ 1923ರಿಂದ ಮೇ ದಿನವನ್ನು ಆಚರಿಸಲಾಗುತ್ತಿದೆ. ಸಂಘಟಿತ ಮತ್ತು ಅಸಂಘಟಿತ ವರ್ಗವಾಗಿ ಇಂದಿಗೂ ಕಾರ್ಮಿಕರು ಶೋಚನೀಯ ಪರಿಸ್ಥಿತಿಯಲ್ಲೆ ಹಳೇ ವೃತ್ತಿಯಲ್ಲೇ ಅವಲಂಬಿತರಾಗಿದ್ದಾರೆ. ಪತ್ರಿಕಾ ವಿತರಕರು ಸಹ ಪ್ರತಿದಿನ ಬೆಳಗ್ಗೆ ಮುಂಜಾನೆ ಹೊತ್ತಿನಲ್ಲೇ ಮನೆಮನೆಗೆ ಮಾಹಿತಿ ತಲುಪಿಸುವ ಕಾರ್ಯ ನಿರ್ವಹಿಸುತ್ತಾರೆ. ಪತ್ರಿಕಾ ವಿತರಕರ ಕಾರ್ಮಿಕರಿಗೆ ಸರ್ಕಾರಗಳು ಸೂಕ್ತ ಆರ್ಥಿಕ ಭದ್ರತೆಯನ್ನು ಒದಗಿಸಬೇಕಾಗಿದೆ. ಮೈಸೂರು ಜಿಲ್ಲೆಯಲ್ಲಿ ಹತ್ತಾರು ಪತ್ರಿಕೆಗಳು ಸಹಸ್ರಾರು ವಿತರಕರು ಲಕ್ಷಾಂತರ ಮನೆಗಳಿವೆ ಹಾಗಾಗಿ ಸರ್ಕಾರ ಪತ್ರಿಕಾ ವಿತರಕರಿಗೆ ತಿಂಗಳ ಆದಾಯ, ದಿನಗೂಲಿ ಸಂಬಳ ಅಥವಾ ಆರ್ಥಿಕ ಭದ್ರತೆ ಕಾಯ್ದೆ ಜಾರಿಗೊಳಿಸಿ ಸೂಕ್ತ ನ್ಯಾಯ ಒದಗಿಸಬೇಕಾಗಿದೆ ಇಂಟರ್ನೆಟ್  ಇಲ್ಲದ ಕಾಲದಿಂದಲೂ ಸಹ ಪ್ರತಿನಿತ್ಯ ಪತ್ರಿಕೆ ವಿತರಣೆ ನಡೆದುಕೊಂಡು ಬಂದು ಸಾರ್ವಜನಿಕರ ಜ್ಞಾನ ಭಂಡಾರವಾಗಿದೆ ಎಂದರು.

ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ   ಸಮಾಜಸೇವಕ ವಿಕ್ರಂ ಅಯ್ಯಂಗಾರ್, ಜೆಡಿಎಸ್ ಮುಖಂಡ ಅಜಯ್ ಶಾಸ್ತ್ರಿ, ಹರೀಶ್ ನಾಯ್ಡು,ಲಕ್ಷ್ಮಣ್, ಚಂದ್ರಶೇಖರ್, ಶ್ರೀನಿವಾಸ್ ಪ್ರಸಾದ್,  ನಾಗೇಶ್,  ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: