ಕರ್ನಾಟಕಪ್ರಮುಖ ಸುದ್ದಿ

ಬುರ್ಖಾ ಜೊತೆಗೆ ಗೂಂಗಟ್ ನಿಷೇಧಿಸುವಿರಾ? ಶಿವಸೆನೆಗೆ ಒವೈಸಿ ಸವಾಲು

ನವದೆಹಲಿ (ಮೇ 2): ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟದಿಂದ ನೂರಾರು ಅಮಾಯಕರು ಸಾವನ್ನಪ್ಪಿದ ಕಾರಣ ಭದ್ರತಾ ದೃಷ್ಟಿಯಿಂದ ಬುರ್ಖಾ ನಿಷೇಧ ಮಾಡಿದ ಬೆನ್ನಲ್ಲೇ, ಭಾರತದಲ್ಲೂ ಬುರ್ಖಾ ನಿಷೇಧ ಮಾಡಬೇಕು ಎಂದು ಶಿವಸೇನೆ ಒತ್ತಾಯಿಸಿದೆ.

ಈ ಒತ್ತಾಯದ ಕುರಿತು ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಒವೈಸಿ ಅವರು, “ಉಡುಗೆಗಳಿಗೆ ನಿಷೇಧ ವಿಧಿಸಿ ಭಯೋತ್ಪಾದನೆ ವಿರುದ್ಧ ಹೋರಾಡುವುದರ ಬದಲು ಮನಸ್ಥಿತಿ ಬದಲಾಗಬೇಕಿದೆ” ಎಂದಿದ್ದಾರೆ.

ಶಿವಸೇನೆಯ ಮುಖವಾಣಿ ಸಾಮ್ನಾವನ್ನು ಪೋಪಟ್‌ ಮಾಸ್ಟರ್ ಕರೆದಿರುವ ಒವೈಸಿ, ಇದರಲ್ಲಿ ಸಂಪಾದಕೀಯವೂ ಪೇಯ್ಡ್ ನ್ಯೂಸ್ ಆಗಿದೆ. ಇದು ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಚುನಾವಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.

ಬುರ್ಖಾ ಅವರವರ ಆಯ್ಕೆ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಶಿವಸೇನೆ ಓದಬೇಕಿದೆ. ನಿಮಗೆ ಏನು ಇಷ್ಟವೋ ಅದನ್ನು ಧರಿಸಬಹುದು, ಅದು ಬುರ್ಖಾ ಆಗಿರಬಹುದು, ಜೀನ್ಸ್ ಆಗಿರಬಹುದು. ಇಲ್ಲಿ ಆಯ್ಕೆ ಇದೆ. ಅದು ನಮ್ಮ ಮೂಲಭೂತ ಹಕ್ಕು ಕೂಡಾ ಆಗಿದೆ ಎಂದಿದ್ದಾರೆ ಒವೈಸಿ.

ಮೋದಿಯನ್ನು ಪರಾಭವಗೊಳಿಸುತ್ತೇವೆ ಎಂದು ಶಿವಸೇನೆ ಈ ಹಿಂದೆ ಸಿಕ್ಕಾಪಟ್ಟೆ ಬರೆದಿತ್ತು. ಆದರೆ ಇವತ್ತು ಅವರೆಲ್ಲರೂ ಜತೆಯಾಗಿದ್ದಾರೆ. ಶಿವಸೇನೆ ಅಸಂಬದ್ಧವಾಗಿ ಮಾತನಾಡುತ್ತಿದೆ. ಕಾನೂನು ಚೌಕಟ್ಟುಗಳನ್ನು ಶಿವಸೇನೆ ಅರ್ಥ ಮಾಡಿಕೊಳ್ಳುವುದಿಲ್ಲ.

ಭಯೋತ್ಪಾದನೆಯೇ ಈಗ ಧರ್ಮ ಆಗಿಬಿಟ್ಟಿದೆ. ಈ ಹಿಂದೆ ಕೆಲವೊಬ್ಬರು ಮಹಿಳೆಯರು ಜೀನ್ಸ್ ಧರಿಸಬಾರದು ಎಂದು ಹೇಳಿದ್ದರು. ಭಾರತದಲ್ಲಿರುವ ಮಹಿಳೆಯರು ಗೂಂಗಟ್ ಅಂದರೆ ಮುಖ ಮುಚ್ಚುವಂತೆ ತಲೆ ಮೇಲೆ ಸೆರಗು ಹೊದ್ದುಕೊಳ್ಳುವುದನ್ನೂ ನೀವು ನಿಷೇಧಿಸುತ್ತೀರಾ? ವಸ್ತ್ರಗಳಿಂದ ಭಯೋತ್ಪಾದನೆಯನ್ನು ನಿರ್ಧರಿಸುವುದಾದರೆ ಪ್ರಜ್ಞಾ ಸಿಂಗ್ ಠಾಕೂರ್ ಧರಿಸಿರುವುದು ಏನನ್ನು? ಎಂದು ಓವೈಸಿಯವರು ಅವರು ಪ್ರಶ್ನಿಸಿದ್ದಾರೆ?

ಚುನಾವಣೆಯ ವೇಳೆ ಜನರನ್ನು ಧ್ರುವೀಕರಣಗೊಳಿಸುವ ಕಾರ್ಯವನ್ನು ಶಿವಸೇನೆ ಮಾಡುತ್ತಿದೆ ಎಂದು ಆರೋಪಿಸಿರುವ ಒವೈಸಿ, ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ. (ಎನ್.ಬಿ)

Leave a Reply

comments

Related Articles

error: