
ಪ್ರಮುಖ ಸುದ್ದಿ
ಗುಪ್ತಚರ ಅಧಿಕಾರಿಗಳನ್ನ ಬಿಡಲು ನಾವೇನು ಉಗ್ರರಾ ..? : ಸಿಎಂ ವಿರುದ್ಧ ಮಾಜಿ ಶಾಸಕ ಚಲುವರಾಯ ಸ್ವಾಮಿ ಅಸಮಾಧಾನ
ರಾಜ್ಯ(ಮಂಡ್ಯ)ಮೇ.2:- ಮಂಡ್ಯದಲ್ಲಿ ನಾವೇ ಸಮರ್ಥರಿದ್ದೇವೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಅದೇ ಕಾರಣಕ್ಕೆ ಅವರು ನಮ್ಮನ್ನು ಸಂಪರ್ಕಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಚಲುವರಾಯ ಸ್ವಾಮಿ ಟಾಂಗ್ ನೀಡಿದ್ದಾರೆ.
ಮಂಡ್ಯದಲ್ಲಿ ಇಂದು ಮಾತನಾಡಿದ ಮಾಜಿ ಶಾಸಕ ಚಲುವರಾಯಸ್ವಾಮಿ, ಮಂಡ್ಯ ಲೋಕಸಭೆ ಚುನಾವಣೆ ಸಂಬಂಧ ನನ್ನ ಜತೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಲ್ಲದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾದರೂ ಮಾತನಾಡಬಹುದಿತ್ತು. ಆದರೆ ಯಾರೂ ಮಾತನಾಡಿಸಲಿಲ್ಲ. ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದರು. ಆದರೆ ಕೊಡಲಿಲ್ಲ. ಅಲ್ಲದೆ ಪಕ್ಷೇತರ ಅಭ್ಯರ್ಥಿ ಪರ ಕೆಲಸ ಮಾಡಬೇಡಿ ಎಂದು ಕಾಂಗ್ರೆಸ್ ನಾಯಕರು ಸೂಚಿಸಿದ್ದರು. ಹೀಗಾಗಿ ಅವರ ಪರ ಪ್ರಚಾರ ನಡೆಸಿಲ್ಲ ಎಂದಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಲಾಗದ ಸ್ಥಿತಿ ಅಂದು ಇತ್ತು. ಹೀಗಾಗಿ ನಿಖಿಲ್ ಪರ ಪ್ರಚಾರ ಮಾಡಲಿಲ್ಲ. ಯಾರ ಪರವೂ ಪ್ರಚಾರ ಮಾಡದೇ ದೂರ ಉಳಿದೆವು. ಈ ನಡುವೆ ಅಧಿಕಾರಿಗಳೇ ಹಣ ಹಂಚುವ ಕೆಲಸದಲ್ಲಿ ತೊಡಗಿದ್ದರು. ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಾಗೆಯೇ ನಮ್ಮ ಮನೆಯ ಬಳಿ 8 ಮಂದಿ ಗುಪ್ತಚರ ಅಧಿಕಾರಿಗಳನ್ನು ಬಿಟ್ಟಿದ್ದರು. ನಮ್ಮ ವಿರುದ್ಧ ಅಗತ್ಯವಿರುವಷ್ಟು ಸಾಕ್ಷ್ಯ ಕಲೆ ಹಾಕಿದ್ದಾರೆ. ಗುಪ್ತಚರ ಅಧಿಕಾರಿಗಳನ್ನು ಬಿಡಲು ನಾವೇನು ಉಗ್ರರಾ ..? ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)