ಕರ್ನಾಟಕಪ್ರಮುಖ ಸುದ್ದಿಮೈಸೂರು

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಪ್ರಕಟ: ಎದುರಾಯ್ತು ಮತ್ತೊಂದು ಚುನಾವಣಾ ಸಮರ!

ಗ್ರಾ.ಪಂ.ಗಳಿಗೆ ಮೇ 13 ರಂದು, ನಗರಗಳಲ್ಲಿ ಮೇ 29 ರಂದು ಮತದಾನ; ಮೈಸೂರು ಜಿಲ್ಲೆಯ ನಂಜನಗೂಡು ನಗರಸಭೆ, ಕೆ.ಆರ್.ನಗರ, ಬನ್ನೂರು ಪುರಸಭೆ; ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪುರಸಭೆ, ಯಳಂದೂರು, ಹನೂರು ಪಟ್ಟಣ ಪಂಚಾಯ್ತಿ; ಮಂಡ್ಯ ಜಿಲ್ಲೆಯ ಮಳವಳ್ಳಿ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ ಪುರಸಭೆಗೆ ಚುನಾವಣೆ

ಬೆಂಗಳೂರು (ಮೇ 2): ರಾಜ್ಯದ 63 ಸ್ಥಳೀಯ ಸಂಸ್ಥೆಗಳ 1361 ವಾರ್ಡ್‍ಗಳಿಗೆ ಮತ್ತು ಗ್ರಾಮ ಪಂಚಾಯಿತಿಯ 202 ಕ್ಷೇತ್ರಗಳು, ತಾ.ಪಂಚಾಯ್ತಿಗಳ 10 ಕ್ಷೇತ್ರಗಳಿಗೆ ಮಿನಿ ಮಹಾಸಮರದ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗ ಇಂದು ಘೋಷಣೆ ಮಾಡಿದೆ.

ಬಿಬಿಎಂಪಿ 2 ವಾರ್ಡ್, ತುಮಕೂರು ಪಾಲಿಕೆಯ 1 ವಾರ್ಡ್ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಮೇ 29ರಂದು ಚುನಾವಣೆ ನಡೆಯಲಿದ್ದು, ಗ್ರಾ.ಪಂ.ಗಳಲ್ಲಿ ತೆರವಾಗಿರುವ ಕ್ಷೇತ್ರಗಳಿಗೆ ಮೇ 13ರಂದು ಮತದಾನ ನಡೆಯಲಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಮೇ 9 ರಿಂದ ಅಧಿಸೂಚನೆ ಜಾರಿಯಾಗಲಿದೆ. ಚುನಾವಣೆ ನಡೆಯುವ ಕ್ಷೇತ್ರಗಳಿಗೆ ನೀತಿ ಸಂಹಿತೆ ಸೀಮಿತವಾಗಿರಲಿದೆ ಎಂದು ಆಯೋಗದ ಆಯುಕ್ತ ಶ್ರೀನಿವಾಸ ಚಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಬಿಎಂಪಿಯ ವಾರ್ಡ್ (60) ಸಗಾಯಿಪುರ, ವಾರ್ಡ್ (103) ಕಾವೇರಿಪುರ, ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ( 22) ಈ ಮೂರು ವಾರ್ಡ್‍ಗಳಲ್ಲಿ ಸದಸ್ಯರು ನಿಧನರಾಗಿದ್ದಾರೆ ಜೊತೆಗೆ ಬೆಳಗಾವಿ ಸದಲಗ ಪುರಸಭೆಯ ವಾರ್ಡ್ (19) ಮುಗಳಕೋಡ ಪುರಸಭೆಯ ವಾರ್ಡ್ (2)ನ ಸದಸ್ಯರು ನಿಧನರಾಗಿದ್ದಾರೆ. ಹೆಬ್ಬಗೋಡಿ ನಗರಸಭೆ ವಾರ್ಡ್ (26)ನ ಸದಸ್ಯರು ರಾಜೀನಾಮೆ ನೀಡಿರುವುದರಿಂದ ಕ್ಷೇತ್ರಗಳು ತೆರವಾಗಿದ್ದು, ಎಲ್ಲ ವಾರ್ಡ್‍ಗಳಿಗೆ ಮೇ 29ರಂದೇ ಚುನಾವಣೆ ನಡೆಯಲಿದೆ.

ಯಾವ ಯಾವ ನಗರಸ್ಥಳೀಯ ಸಂಸ್ಥೆ ಚುನಾವಣೆ?

ಬೆಂಗಳೂರು ನಗರ ಜಿಲ್ಲೆಯ ಆನೇಕಲ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ನೆಲಮಂಗಲ ಪುರಸಭೆಗಳು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರಸಭೆ, ಮೊಳಕಾಲ್ಮೂರು, ಹೊಳಲ್ಕೆರೆ ಪಟ್ಟಣ ಪಂಚಾಯ್ತಿ, ದಾವಣಗೆರೆಯ ಹರಿಹರ ನಗರಸಭೆ , ಕೋಲಾರ ಜಿಲ್ಲೆಯ ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು ಪುರಸಭೆ, ಚಿಕ್ಕಬಳ್ಳಾಪುರ ಶಿಡ್ಲಘಟ್ಟ ನಗರಸಭೆ, ಬಾಗೇಪಲ್ಲಿ ಪುರಸಭೆ.

ಶಿವಮೊಗ್ಗ ಜಿಲ್ಲೆಯ ಸಾಗರ, ಶಿಕಾರಿಪುರ ಪುರಸಭೆ, ಶಿರಾ, ಕೊಪ್ಪ, ಸೊರಬ, ಹೊಸನಗರ ಪಟ್ಟಣಪಂಚಾಯ್ತಿ, ತುಮಕೂರು ಜಿಲ್ಲೆಯ ತಿಪಟೂರು ನಗರಸಭೆ, ಪಾವಗಡ, ಕುಣಿಗಲ್ ಪುರಸಭೆ, ತುರುವೆಕೆರೆ ಪಟ್ಟಣಪಂಚಾಯ್ತಿ, ಮೈಸೂರು ಜಿಲ್ಲೆಯ ನಂಜನಗೂಡು ನಗರಸಭೆ, ಕೆ.ಆರ್.ನಗರ, ಬನ್ನೂರು ಪುರಸಭೆ, ಚಿಕ್ಕಮಗಳುರು ಜಿಲ್ಲೆಯ ಕಡೂರು ಪುರಸಭೆ, ಕೊಪ್ಪ, ಶೃಂಗೇರಿ, ಮೂಡಿಗೆರೆ, ನರಸಿಂಹರಾಜಪುರ ಪಟ್ಟಣ ಪಂಚಾಯ್ತಿಗಳು, ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ, ಸೂಳ್ಯ ಪಟ್ಟಣಪಂಚಾಯ್ತಿ,

ಮೂಡಬಿದರೆ ಪುರಸಭೆ, ಹಾಸನ ಜಿಲ್ಲೆಯ ಆಲೂರು, ಅರಕಲಗೂಡು ಪಟ್ಟಣ ಪಂಚಾಯ್ತಿ, ಮಂಡ್ಯ ಜಿಲ್ಲೆಯ ಮಳವಳ್ಳಿ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ ಪುರಸಭೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪುರಸಭೆ, ಯಳಂದೂರು, ಹನೂರು ಪಟ್ಟಣ ಪಂಚಾಯ್ತಿ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಇಂಡಿ, ತಾಳಿಕೋಟೆ ಪುರಸಭೆ, ಧಾರವಾಡ ಜಿಲ್ಲೆಯ ನವಲಗುಂದ ಪುರಸಭೆ, ಕಲಘಟಗಿ ,

ಹಳ್ಳಾವರ ಪಟ್ಟಣಪಂಚಾಯ್ತಿ, ಮುಂಡರಗಿ,ನರಗುಂದ ಪುರಸಭೆ, ಹಾವೇರಿ ಜಿಲ್ಲೆಯ ಬ್ಯಾಡಗಿ, ಸಿಗ್ಗಾವ್ ಪುರಸಭೆಗಳು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪುರಸಭೆ, ಹೊನ್ನಾವರ, ಸಿದ್ದಾಪುರ ಪಟ್ಟಣ ಪಂಚಾಯ್ತಿ, ಬೀದರ್‍ನ ಬಸವಕಲ್ಯಾಣ ನಗರಸಭೆ, ಬಾಲ್ಕಿ, ಹುಮ್ನಾಬಾದ್, ಚಿತಗುಪ್ಪ ಪುರಸಭೆಗಳು, ಔರಾದ್ ಪಟ್ಟಣಪಂಚಾಯ್ತಿ, ಬಳ್ಳಾರಿ ಜಿಲ್ಲೆಯ ಸಂಡೂರು, ಹರಪನಹಳ್ಳಿ, ಹೂವಿನಹಡಗಲಿ ಪುರಸಭೆ, ಕಮಲಾಪುರ ಪಟ್ಟಣಪಂಚಾಯ್ತಿ, ಯಾದಗಿರಿ ಜಿಲ್ಲೆಯ ಶಹಪುರ ನಗರಸಭೆ ಸೇರಿ 22 ಜಿಲ್ಲೆಯ 63 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.

ನಗರಸಭೆಯ 248, ಪುರಸಭೆ 783, ಪಟ್ಟಣಪಂಚಾಯ್ತಿ 330 ಸೇರಿ 1361 ವಾರ್ಡ್‍ಗಳಿದ್ದು, ಇವುಗಳ ಮತದಾನಕ್ಕೆ 1646 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 7,37,006 ಪುರಷರು , 7,36,899 ಮಹಿಳೆಯರು,ಇತರೆ 181 ಸೇರಿ ಒಟ್ಟು 14,74,086 ಮತದಾರರು ಹಕ್ಕು ಚಲಾಯಿಸಲಿದ್ದಾರೆ.

8,230 ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, 1998 ಮತ ಯಂತ್ರಗಳು ಮತ್ತು ಕಂಟ್ರೋಲ್ ಯೂನಿಟ್‍ಗಳನ್ನು ಬಳಕೆ ಮಾಡಲಾಗುತ್ತಿದೆ.
ರಾಮನಗರ ಹಾಗೂ ಕಲಬುರಗಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಮತ್ತು ವಾರ್ಡ್ ವಿಂಗಡಣೆಯ ಪ್ರಕರಣ ನ್ಯಾಯಾಲಯದಲ್ಲಿದೆ. ಅದೇ ರೀತಿ ಈಗ ಚುನಾವಣೆ ಘೋಷಿಸಿರುವ ಸಂಸ್ಥೆಗಳ 39 ವಾರ್ಡ್‍ಗಳ ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ ಇಷ್ಟು ಕ್ಷೇತ್ರಗಳಿಗೆ ಚುನಾವಣೆ ನಡೆಸುತ್ತಿಲ್ಲ.

ಬಹುತೇಕ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳ ಸ್ಥಳೀಯ ಸಂಸ್ಥೆಗಳ ವಿವಾದ, ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ ಚುನಾವಣೆಯನ್ನು ನಡೆಸುತ್ತಿಲ್ಲ ಎಂದು ಹೇಳಿದರು. ಚುನಾವಣೆಗೆ ಅಭ್ಯರ್ಥಿಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‍ಗೆ 5 ಲಕ್ಷ , ತುಮಕೂರು ಪಾಲಿಕೆಯಲ್ಲಿ 3 ಲಕ್ಷ, ನಗರಸಭೆಯಲ್ಲಿ ಎರಡು ಲಕ್ಷ, ಪುರಸಭೆಯಲ್ಲಿ ಒಂದೂವರೆ ಲಕ್ಷ, ಪಟ್ಟಣಪಂಚಾಯ್ತಿಯಲ್ಲಿ ಒಂದು ಲಕ್ಷ ರೂ.ಗಳನ್ನು ಚುನಾವಣಾ ವೆಚ್ಚ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆಯಾ ಕ್ಷೇತ್ರಗಳಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಪಂಚಾಯತ್ ಸಂಸ್ಥೆಗಳಲ್ಲಿ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ ದಿನದಿಂದ ನೀತಿ ಸಂಹಿತೆ ಜಾರಿಗೆ ಬರಲಿದೆ. ಈ ಬಾರಿ ವಿಶೇಷವಾಗಿ ಪಂಚಾಯತ್ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಎಲ್ಲಾ ಮದ್ಯದಂಗಡಿಗಳನ್ನು ನಿಷೇಧಿಸಲಾಗುವುದು. ಆಯಾ ಕ್ಷೇತ್ರಗಳಲ್ಲಿ ಡಿಸ್ಟಲರಿಗಳಿದ್ದರೂ ಅವುಗಳ ಬಾಗಿಲಿಗೂ ಬೀಗ ಹಾಕಲಾಗುವುದು ಎಂದು ಅವರು ತಿಳಿಸಿದರು.

ಉಪಚುನಾವಣೆ : ವಿವಿಧ ಕಾರಣಗಳಿಂದ ತೆರವಾಗಿರುವ 8 ತಾಲೂಕು ಪಂಚಾಯಿತಿಗಳ 10 ಕ್ಷೇತ್ರಗಳು, 202 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಇದೇ ದಿನ ಉಪಚುನಾವಣೆ ನಡೆಯಲಿದೆ, ಉಳಿದಂತೆ ಅವಧಿ ಮುಗಿದಿರುವ 8 ನಗರಸಭೆ, 33 ಪುರಸಭೆ, 22ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆಯ ನಡೆಯಲಿದೆ ಎಂದು ಇದೇ ವೇಳೆ ಪ್ರಕಟಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: